ಪೆರ್ಡೂರು:14 ನೇ ಶತಮಾನದ ಶಾಸನ ಅಧ್ಯಯನ

ಹಿರಿಯಡಕ: ಉಡುಪಿ ತಾಲ್ಲೂಕಿನ ಪೆರ್ಡೂರು ಗ್ರಾಮದ ಗೊರೆಲ್-ನೆಲ್ಯಾರುಬೆಟ್ಟು ಇಲ್ಲಿನ ಗುಲಾಬಿ ಮರಕಾಲ್ತಿ ಅವರ ಗದ್ದೆಯಲ್ಲಿ ಇರುವ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ, ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ ಎಸ್.ಎ. ಕೃಷ್ಣಯ್ಯ, ಯು. ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಕೆ. ಶ್ರೀಧರ್ ಭಟ್ ಹಾಗೂ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಮಾರ್ಗದರ್ಶನದಲ್ಲಿ ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ ಮತ್ತು ದಿಶಾಂತ್ ದೇವಾಡಿಗ ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ಶಾಸನವು 3 ಅಡಿ ಎತ್ತರ ಹಾಗೂ 2 ಅಡಿ ಅಗಲ ಹೊಂದಿದ್ದು, ಮೇಲ್ಭಾಗದಲ್ಲಿ ಸೂರ್ಯ–ಚಂದ್ರ, ಶಿವಲಿಂಗ ಮತ್ತು ಇದರ ಇಕ್ಕೆಲಗಳಲ್ಲಿ ರಾಜಕತ್ತಿ, ನಂದಿ, ದೀಪಸ್ತಂಭದ ಕೆತ್ತನೆ ಇದೆ. ಕನ್ನಡ ಲಿಪಿ ಮತ್ತು ಭಾಷೆ ಒಳಗೊಂಡಿರುವ ಈ ಶಾಸನದ ಹೆಚ್ಚಿನ ಸಾಲುಗಳು ಅಳಿಸಿ ಹೋಗಿದ್ದು, ಶಾಸನ ‘ಶ್ರೀ ಗಣಾಧಿಪತಿಂ ನಮಃ’ ಎಂಬ ಶುಭ ಸೂಚಕದಿಂದ ಪ್ರಾರಂಭವಾಗಿದೆ. ಗೋಚರಿಸುವ ಸಾಲುಗಳಲ್ಲಿ ದಿಕ್ಕುಗಳ ಉಲ್ಲೇಖ ಇರುವುದರಿಂದ ಇದೊಂದು ದಾನ ಶಾಸನವಾಗಿರಬಹುದೆಂದು ಹಾಗೂ ಲಿಪಿಯ ಆಧಾರದ ಮೇಲೆ 1 ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಸ್ಥಳೀಯರಾದ ದಿನೇಶ್ ಕುಂದರ್, ಸುಂದರ ಮತ್ತು ನಿತ್ಯಾನಂದ ಸಹಕರಿಸಿದ್ದಾರೆ.