ಶಾಲಾ ಪಠ್ಯ ಪುಸ್ತಕಗಳ ಕೇಸರೀಕರಣ ವಿವಾದ: ಮಕ್ಕಳಿಗೆ ‘ನೈಜ ಇತಿಹಾಸ’ ಕಲಿಸುತ್ತೇವೆ ಎಂದ ಶಿಕ್ಷಣ ಸಚಿವ

ಬೆಂಗಳೂರು: ಶಾಲಾ ಪಠ್ಯಪುಸ್ತಕಗಳ ವಿವಾದಾತ್ಮಕ ಪರಿಷ್ಕರಣೆ ಕುರಿತು ಮೌನ ಮುರಿದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ “ನೈಜ” ಇತಿಹಾಸವನ್ನು ಕಲಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶಿಕ್ಷಣವನ್ನು ಕೇಸರಿಕರಣಗೊಳಿಸುವ ಆರೋಪವನ್ನು ತಳ್ಳಿಹಾಕಿದ ಅವರು, “ಕೆಲವು ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳು ಪರಿಷ್ಕೃತ ಪಠ್ಯಪುಸ್ತಕಗಳನ್ನು ನೋಡದೆಯೆ ಜಾತಿ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದಿದ್ದಾರೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಹಿಂದಿನ ಸಮಿತಿಯು ಪರಿಷ್ಕರಿಸಿದ ಪಠ್ಯಪುಸ್ತಕಗಳು ಸುಳ್ಳು ಮತ್ತು ತಪ್ಪು ಮಾಹಿತಿಯಿಂದ ತುಂಬಿವೆ ಎಂದ ಅವರು, “ನಾವು ಸತ್ಯವನ್ನು ಕಲಿಸಲು ಪ್ರಯತ್ನಿಸುತ್ತಿದ್ದೇವೆ. ಅರ್ಧ ಸತ್ಯವನ್ನು ಬೋಧಿಸುವುದರಲ್ಲಿ ನಮಗೆ ನಂಬಿಕೆಯಿಲ್ಲ, ಆದ್ದರಿಂದ ನಾವು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದೇವೆ.”

ಟಿಪ್ಪು ಸುಲ್ತಾನ್ ಪಠ್ಯದ ಕೆಲವು ವಿಷಯವನ್ನು ತೆಗೆದುಹಾಕಿರುವುದನ್ನು ಸಮರ್ಥಿಸಿರುವ ಸಚಿವ “ಒಡೆಯರ್ ರಾಜವಂಶದ ಬಗ್ಗೆ ಏಕೆ ಸಾಕಷ್ಟು ಮಾಹಿತಿ ಇರಲಿಲ್ಲ? ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಹೆಚ್ಚು ಹೇಳುವ ಅಗತ್ಯ ಏನಿತ್ತು? ಹೌದು ನಾವು ವಿಷಯವನ್ನು ಕಡಿತಗೊಳಿಸಿದ್ದೇವೆ ಮತ್ತು ಅಗತ್ಯವಾಗಿರುವುದನ್ನು ಉಳಿಸಿಕೊಂಡಿದ್ದೇವೆ”.

ಇತಿಹಾಸ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣಗುರು ಅವರ ಪಠ್ಯವನ್ನು ತೆಗೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾರಾಯಣ ಗುರುಗಳ ಪಠ್ಯವನ್ನು ಕನ್ನಡಕ್ಕೆ ವರ್ಗಾಯಿಸಲಾಗಿದೆ, ಇತಿಹಾಸ ಪುಸ್ತಕದಲ್ಲಿ ಈಗಾಗಲೇ ಅಧಿಕ ಹೊರೆ ಇದ್ದು, ಅದನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ತಿದ್ದುಪಡಿಯ ಅಗತ್ಯವಿದ್ದರೆ ಅದನ್ನು ಮಾಡಲಾಗುತ್ತದೆ. ಕಮ್ಯೂನಿಸ್ಟ್ ವಿಚಾರಧಾರೆಯ ಜಿ.ರಾಮಚಂದ್ರ ಅವರು ಭಗತ್ ಸಿಂಗ್ ಬಗ್ಗೆ ಬರೆದಿರುವ ಅಧ್ಯಾಯವನ್ನು ಬದಲಿಸಿ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಅಧ್ಯಾಯವನ್ನು ಸೇರಿಸಲಾಗಿದೆ. ಜಿ.ರಾಮಚಂದ್ರ ಬರೆದ ಅಧ್ಯಾಯವನ್ನು ಸೇರಿಸಬಹುದಾದರೆ, ಸೂಲಿಬೆಲೆ ಬರೆದದ್ದನ್ನು ಏಕೆ ಸೇರಿಸಬಾರದು? ಜವಾಹರ ಲಾಲ್ ನೆಹರೂರವರು ಮಗಳಿಗೆ ಬರೆದ ಪತ್ರವನ್ನು ಪಾಠ ಪುಸ್ತಕದಲ್ಲಿ ಸೇರಿಸುವ ಅಗತ್ಯವೇನಿದೆ? ತಂದೆ ತನ್ನ ಮಗಳಿಗೆ ಬರೆದ ಪತ್ರಗಳನ್ನು ನಮ್ಮ ಮಕ್ಕಳು ಏಕೆ ಅಧ್ಯಯನ ಮಾಡಬೇಕು? ಅವರು ಏನನ್ನು ಕಲಿಸಲು ಪ್ರಯತ್ನಿಸುತ್ತಿದ್ದರು? ಎಂದು ವಿವಾದ ಸೃಷ್ಟಿಸುವವರನ್ನು ಪ್ರಶ್ನಿಸಿದ್ದಾರೆ.

ವಿವಾದ ಸೃಷ್ಟಿಸುವವರು ಪಠ್ಯಪುಸ್ತಕದ ಪ್ರತಿ ಬರುವವರೆಗೂ ಕಾದು ನೋಡಬೇಕು ಎಂದು ಅವರು ಹೇಳಿದ್ದಾರೆ.