ಹೂಡೆ: ಈಜಲು ಹೋದ ವಿದ್ಯಾರ್ಥಿಗಳು ಸಮುದ್ರ ಪಾಲು

ಹೂಡೆ: ಇಲ್ಲಿನ ಸಮುದ್ರದಲ್ಲಿ ಈಜಾಡಲೆಂದು ತೆರಳಿದ್ದ ಮಣಿಪಾಲ ಎಂಐಟಿಯ 15 ವಿದ್ಯಾರ್ಥಿಗಳ ತಂಡದಿಂದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾದ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಸಂಜೆ 5.30 ರಿಂದ 6 ಗಂಟೆಯೊಳಗೆ ಈ ಘಟನೆ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕ ಹಾಕೆ ಅಕ್ಷಯ್ ತಿಳಿಸಿದ್ದಾರೆ.

ಸಮುದ್ರದಲ್ಲಿ ಈಜಾಡುತ್ತಿದ್ದ ಸಂದರ್ಭ, ಅಲೆಯ ರಭಸಕ್ಕೆ ಸಿಲುಕಿದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಇವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳೀಯರ ಪ್ರಕಾರ ಇಬ್ಬರ ದೇಹಗಳು ನೀರಿನಲ್ಲಿ ತೇಲುತ್ತಿದ್ದು, ಅವರನ್ನು ದಡಕ್ಕೆ ತರಲಾಗಿದೆ. ಭಾನುವಾರದಂದು ಮಹಾಲಯ ಅಮಾವಾಸ್ಯೆಯಾದ್ದರಿಂದ ಸಮುದ್ರದಲ್ಲಿ ಅಲೆಗಳ ರಭಸ ಜೋರಾಗಿತ್ತು. ವಿದ್ಯಾರ್ಥಿಗಳಿಗೆ ಈಜಾಡಲು ತೆರಳಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ಅದನ್ನು ಅಲಕ್ಷಿಸಿ ಸಮುದ್ರಕ್ಕೆ ಇಳಿದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಹೂಡೆ ಬೀಚಿನಲ್ಲಿ ಜನ ಜಂಗುಳಿ ಕಡಿಮೆ ಇದ್ದು, ಇಲ್ಲಿ ಜೀವರಕ್ಷಕದಳವನ್ನು ನಿಯುಕ್ತಿ ಮಾಡಲಾಗಿಲ್ಲ.

ಮತ್ತೊಬ್ಬ ವಿದ್ಯಾರ್ಥಿ ಹೈದರಾಬಾದಿನವರೆನ್ನಲಾದ ಶ್ರೀಕರಣಿ ಎಂಬವರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.