ವಿದ್ಯಾರ್ಥಿಗಳ ಸಾಧನೆಯೆ ವ್ಯಕ್ತಿಗಳ ಪ್ರಶ್ನೆಗಳಿಗೆ ಉತ್ತರವಾಗಬೇಕು: ರಘುಪತಿ ಭಟ್

ಉಡುಪಿ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಬೇಕು, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು, ಅವರ ಸಾಧನೆಯು ಎಲ್ಲ ವ್ಯಕ್ತಿಗಳ ಪ್ರಶ್ನೆಗಳಿಗೆ ಉತ್ತರವಾಗಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಯಶಪಾಲ್ ಸುವರ್ಣ, ಸಾಪಲ್ಯ ಟ್ರಸ್ಟ್, ಆಭರಣ ಜ್ಯುವೆಲ್ಲರ್ಸ್, ಸಾಯಿರಾಂ ಟೆಕ್ಸ್ ಟೈಲ್ಸ್ ಗಳ ಪ್ರಾಯೋಜಕತ್ವದ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಲವು ಅಡೆತಡೆಗಳನ್ನು ಮೀರಿ ನಿಂತು, ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ವಿದ್ಯಾದಾನ ನೀಡುತ್ತಿದೆ. ಪ್ರತಿವರ್ಷ ವಿದ್ಯಾರ್ಥಿನಿಯರ ಸಂಖ್ಯೆ ಮತ್ತು ಸಾಧಕರ ಸಂಖ್ಯೆಯೂ ಹೆಚ್ಚುತ್ತಿದೆ ಇದು ಹೀಗೆಯೆ ಮುಂದುವರಿಯುತ್ತಿರಲಿ ಎಂದರು.

ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಶ್ರೀ ಯಶಪಾಲ್ ಸುವರ್ಣ ಮಾತನಾಡಿ, ಬಡತನದ ಹಿನ್ನೆಲೆಯಿಂದ ಬಂದವರೂ ಕೂಡ ಈ ಶಾಲೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ ಎಂದ ಅವರು ಈ ವರ್ಷದ ಸಾಧಕಿ ಗಾಯತ್ರಿಯ ಮುಂದಿನ ವಿದ್ಯಾಭ್ಯಾಸದ ಎಲ್ಲ ಖರ್ಚುವೆಚ್ಚಗಳನ್ನು ಭರಿಸುವ ಭರವಸೆ ನೀಡಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಿಯಾದ ಗಾಯತ್ರಿ ಮತ್ತು ಅತಿ ಹೆಚ್ಚು ಅಂಕ ಗಳಿಸಿದ 48 ವಿದ್ಯಾರ್ಥಿನಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಗರಸಭಾ ಸದಸ್ಯೆ ರಶ್ಮಿ ಸಿ ಭಟ್, ಎಸ್ ಡಿ ಎಂ ಸಿ ಅಧ್ಯಕ್ಷೆ ವಿನೋದ ಸುವರ್ಣ, ಪ್ರಾಂಶುಪಾಲ ರುದ್ರೆ ಗೌಡ, ವಿಶ್ವನಾಥ ಬಾಯಿರಿ, ಎಸ್ ಡಿ ಎಂ ಸಿ ಗೌರವಾಧ್ಯಕ್ಷೆ ಶ್ರೀಮತಿ ತಾರಾ, ಸಾಫಲ್ಯ ಟ್ರಸ್ಟ್ ನ ಶ್ರೀಮತಿ ಶಾಂಭವಿ ಮುಂತಾದವರು ಭಾಗವಹಿಸಿದ್ದರು.

ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಇಂದಿರಾ ವಂದಿಸಿದರು.