ಬೆಂಗಳೂರು: ಸುಪ್ರೀಂ ಕೋರ್ಟ್ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ ಬೆನ್ನಲ್ಲೇ, ಕರ್ನಾಟಕ ಸರ್ಕಾರವೂ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಅಗತ್ಯ ನಿಯಮಾವಳಿ ರೂಪಿಸುವ ಸಿದ್ಧತೆ ನಡೆಸಿದೆ. ಈ ಸಂಬಂಧ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದ್ದು, ಅಡ್ವೊಕೇಟ್ ಜನರಲ್ (ಎಜಿ) ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಬೈಕ್ ಟ್ಯಾಕ್ಸಿಗಳಿಗೆ ಹಳದಿ ಫಲಕ ಕಡ್ಡಾಯಗೊಳಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
ಬೈಕ್ ಟ್ಯಾಕ್ಸಿ ಸೇವೆಯನ್ನು ಯಾರೂ ಬೇಕಾಬಿಟ್ಟಿಯಾಗಿ ನಡೆಸಲು ಅವಕಾಶ ನೀಡದೆ, ಸಾರಿಗೆ ಇಲಾಖೆಯ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿಯೇ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹಲವು ಕಠಿಣ ನಿಯಮಗಳನ್ನು ರೂಪಿಸುವ ಸಾಧ್ಯತೆಯಿದೆ.
ಬೈಕ್ ಟ್ಯಾಕ್ಸಿಗೆ ಜಾರಿಯಾಗಬಹುದಾದ ಪ್ರಮುಖ ನಿಯಮಗಳು:
- ಬೈಕ್ ಟ್ಯಾಕ್ಸಿ ಸೇವೆ ಒದಗಿಸುವವರು ಸಾರಿಗೆ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಸಾರಿಗೆ ವಾಹನಗಳಾಗಿ ಪರಿವರ್ತಿಸಿ, ಹಳದಿ ಫಲಕ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ.
- ಬೈಕ್ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿಕೊಂಡು, ಪ್ರಯಾಣಿಕರನ್ನು ಸಾಗಿಸಲು ಅಗತ್ಯ ಪರವಾನಗಿ ಪಡೆಯಬೇಕಾಗಬಹುದು.
- ಪ್ರಯಾಣಿಕರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
- ಬೈಕ್ ಟ್ಯಾಕ್ಸಿಗಳಿಗೆ ವಾಣಿಜ್ಯ ವಿಮೆ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.
- ವಾಹನದ ಅರ್ಹತೆ, ಅನ್ವಯವಾಗುವ ತೆರಿಗೆ ಮತ್ತು ಚಾಲಕರ ದಾಖಲೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮ ರೂಪಿಸಲಾಗುತ್ತದೆ.
- ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಚಾಲಕ, ವಾಹನ ಮಾಲೀಕ ಮತ್ತು ಸೇವೆ ಒದಗಿಸುವ ಸಂಸ್ಥೆಯ ಹೊಣೆಗಾರಿಕೆಯನ್ನು ನಿರ್ಧರಿಸಲಾಗುತ್ತದೆ.
- ಚಾಲಕ ಹಾಗೂ ಪ್ರಯಾಣಿಕರಿಗೆ ಗುಣಮಟ್ಟದ ಹೆಲ್ಮೆಟ್ ಒದಗಿಸುವುದು ಕಡ್ಡಾಯವಾಗಬಹುದು.
- ವಾಹನಗಳ ನಿಯಮಿತ ನಿರ್ವಹಣೆ ಮತ್ತು ಸುರಕ್ಷತಾ ಮಾನದಂಡಗಳಿಗೂ ಆದ್ಯತೆ ನೀಡಲಾಗುತ್ತದೆ.
- ಬೈಕ್ ಟ್ಯಾಕ್ಸಿ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ಗೆ ದರ ನಿಗದಿಪಡಿಸುವ ಬಗ್ಗೆಯೂ ನಿಯಮ ರೂಪಿಸುವ ಸಾಧ್ಯತೆಯಿದೆ.
ಶೀಘ್ರದಲ್ಲೇ ಸರ್ಕಾರ ಹೊಸ ನಿಯಮಾವಳಿ ಪ್ರಕಟಿಸುವ ಸಾಧ್ಯತೆಯಿದ್ದು, ಈಗಾಗಲೇ ಬೈಕ್ ಟ್ಯಾಕ್ಸಿ ಸೇವೆ ಜಾರಿಯಲ್ಲಿರುವ ಇತರ ರಾಜ್ಯಗಳ ನಿಯಮಗಳನ್ನು ಪರಿಶೀಲಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಕಠಿಣ ನಿಯಮಗಳೊಂದಿಗೆ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಸಿದ್ಧತೆ ನಡೆಯುತ್ತಿದ್ದು, ಇದರಿಂದ ಬೈಕ್ ಟ್ಯಾಕ್ಸಿ ಸೇವೆಯನ್ನು ಅವಲಂಬಿಸಿರುವ ಪ್ರಯಾಣಿಕರು ಹಾಗೂ ಈ ವಲಯದಲ್ಲಿ ಉದ್ಯೋಗ ಹೊಂದಿರುವವರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.















