ಮಂಗಳೂರು: ಕೋವಿಡ್ ಅಲೆ ನಿಯಂತ್ರಣಕ್ಕಾಗಿ ನಾಳೆಯಿಂದ (ಮೇ 7) ದ.ಕ ಜಿಲ್ಲೆಯಾದ್ಯಂತ ದ.ಕ. ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಅದರಂತೆ ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ತುರ್ತು ಕೊವಿಡ್ ನಿರ್ವಹಣಾ ಸಭೆ ನಡೆಯಿತು.
ಈ ಸಭೆಯಲ್ಲಿ ಕಠಿಣ ನಿಯಮ ಜಾರಿಗೊಳಿಸುವಂತೆ ಸಚಿವರು ಆದೇಶ ಹೊರಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ಬೆಳಿಗ್ಗೆ 6 ರಿಂದ 9 ಗಂಟೆಯಿಂದ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. 10 ಗಂಟೆ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕಾಗಿದೆ. ಅಲ್ಲದೆ ವಾಹನಗಳಲ್ಲಿ ಬೇರೆ ಕಡೆಗೆ ಓಡಾಡಿದರೆ ವಾಹನವನ್ನು ಸೀಜ್ ಮಾಡಲಾಗುವುದು. ಜನರ ಅನಗತ್ಯ ಓಡಾಟಕ್ಕೆ ಖಾಕಿಯಿಂದ ಕಠಿಣ ಕ್ರಮಕ್ಕೆ ಆದೇಶ ನೀಡಲಾಗಿದೆ.
ಮೇ 15ರ ಮೇಲೆ ಅನುಮತಿ ನೀಡಿರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಯೋಜಿಸಲಾಗಿದ್ದು, ಒಂದು ವೇಳೆ ಕಾರ್ಯಕ್ರಮ ನಿಗದಿಯಾಗಿದ್ದರೆ ಅವರ ಮನವೊಲಿಸಿ ಅದನ್ನು ಮುಂದಕ್ಕೆ ಹಾಕಿಸಲು ನಿರ್ಧಾರ ಕೈಗೊಳ್ಳಲಾಗಿದೆ.