ಹುಬ್ಬಳ್ಳಿ: ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ವಿಶೇಷವಾಗಿ ಗಡಿಭಾಗಗಳಲ್ಲಿ ಕಠಿಣ ನಿಯಮ ತರುವ ಅನಿವಾರ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆ ಮೂಲಕ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ತರುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ನಾಳೆ ದೆಹಲಿಗೆ ಹೋಗುತ್ತಿದ್ದು ಅಲ್ಲಿ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ನಿಯಮ ಜಾರಿಗೆ ತರಲಾಗುವುದು. ಆರೋಗ್ಯ ಇಲಾಖೆ ಮತ್ತು ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ವೈಜ್ಞಾನಿಕ ಪ್ರಗತಿ ಮತ್ತು ಕೇಂದ್ರ ಸರ್ಕಾರದ ಅನಿಸಿಕೆ, ಶಿಫಾಸಲು ಏನಿದೆ ಎಂದು ಚರ್ಚೆ ಮಾಡುತ್ತೇನೆ ಎಂದರು.
ಲಾಕ್ ಡೌನ್ ಮಾಡುವುದಿಲ್ಲ:
ಕೋವಿಡ್ ಒಂದನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಲಾಕ್ ಡೌನ್ ಹೇರಿಕೆ ಮಾಡಿ ಈಗಾಗಲೇ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಎರಡನೇ ಅಲೆ ತಗ್ಗಿದ ನಂತರ ಜನಜೀವನ ಸಹಜ ಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ಹೇರಿಕೆ ಮಾಡಿದರೆ ಕಷ್ಟವಾಗುತ್ತದೆ. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ, ಲಾಕ್ ಡೌನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದರು.