ಕುಂದಾಪುರದಲ್ಲಿ ಅನಗತ್ಯ ವಾಹನ ಓಡಾಟ ನಡೆಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮ: ಇನ್ಮುಂದೆ ಬಿಗಿ ನಿಯಮ

ಕುಂದಾಪುರ : ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಮುಂದಾಗಿರುವ ಉಡುಪಿ ಜಿಲ್ಲಾಡಳಿತ ಬುಧವಾರದಿಂದ ಬಿಗು ಕ್ರಮಕ್ಕೆ ಮುಂದಾಗಿದೆ.

 ಜನರಿಗೆ ಅಗತ್ಯ ವಸ್ತುಗಳನ್ನು ಸಮೀಪದ ಅಂಗಡಿಗಳಲ್ಲೇ ಖರೀದಿಸಬೇಕು. ತೀರಾ ಅವಶ್ಯಕತೆ ಇದ್ದರಷ್ಟೇ ಪೇಟೆಗೆ ಬರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಗ್ರಾಮ ವ್ಯಾಪ್ತಿಯನ್ನು ಬಿಟ್ಟು ಅನಗತ್ಯವಾಗಿ ವಾಹನಗಳು ಹೊರ ಸಂಚರಿಸಿದಂತೆ ನಿರ್ಬಂಧಿಸಿ ಸಾರ್ವಜನಿಕ ಮಾಹಿತಿ ನೀಡಲಾಗಿತ್ತು. ಧ್ವನಿ ವರ್ಧಕದ ಮೂಲಕ ಪ್ರಚಾರ ನಡೆಸಲಾಗಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿಯೂ ಈ ಬಗ್ಗೆ ಸುದ್ದಿಯಾಗಿತ್ತು.

ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ ಬುಧವಾರ ಬೆಳಿಗ್ಗೆಯಿಂದ ಅನಗತ್ಯವಾಗಿ ಹೊರ ಭಾಗದಿಂದ ಕುಂದಾಪುರ ಪೇಟೆಗಿಳಿದ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.

ಕೋಟೇಶ್ವರ, ಕುಂಭಾಶಿ ಹಾಗೂ ಇತರೆಡೆಗಳಿಂದ ಸಕಾರಣವಿಲ್ಲದೆ ಕುಂದಾಪುರ ಪೇಟೆಗೆ ಬಂದವರ ಬೈಕ್, ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಉಪ ವಿಭಾಗಾಧಿಕಾರಿ ಕೆ.ರಾಜು, ಕುಂದಾಪುರ ಡಿವೈಎಸ್ಪಿ ಕೆ. ಶ್ರೀಕಾಂತ್, ಎಸ್.ಐ ಗಳಿಂದ ಸುಬ್ಬಣ್ಣ, ಸದಾಶಿವ ಗವರೊಜಿ ಕಾರ್ಯಾಚರಣೆ ವೇಳೆ ಇದ್ದರು.