ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ದೀಪಗಳು ಬೆಳಗಲು ಪ್ರಾರಂಭ

ಉಡುಪಿ: ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯ ಬೀದಿ ದೀಪಗಳು ಕೊನೆಗೂ ಬೆಳಗಲು ಪ್ರಾರಂಭವಾಗಿದೆ. ಹಲವಾರು ಮನವಿ ಮತ್ತು ಮಾಧ್ಯಮ ವರದಿಗಳ ಬಳಿಕ ರಾಷ್ಟ್ರೀಯ ಹೆದ್ದಾರಿಯ ಬೀದಿ ದೀಪಗಳು ಬೆಳಗಲು ಪ್ರಾರಂಭಿಸಿರುವುದು ನಾಗರಿಕರಲ್ಲಿ ಹರ್ಷವನ್ನುಂಟು ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುರುವಾರ ರಾತ್ರಿಯಂದು ದೀಪಗಳ ಸಂಪರ್ಕವನ್ನು ಸ್ಥಾಪಿಸಿದೆ. ಹೆದ್ದಾರಿ ದೀಪಗಳಿಗೆ ಸಂಪರ್ಕವನ್ನು ನೀಡಿ ವ್ಯವಸ್ಥೆ ಕಲ್ಪಿಸುವಂತೆ ಉಡುಪಿ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಹೆದ್ದಾರಿ ಪ್ರಾಧಿಕಾರವು ದೀಪಗಳಿಗೆ ಸಂಪರ್ಕವನ್ನು ನೀಡಿದೆ.