ಅಚ್ಚಡದಲ್ಲಿ ಬೀದಿ ನಾಯಿಗಳ ದಾಳಿ: ಐದು ಆಡುಗಳು ಬಲಿ; ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಉಡುಪಿ: ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚಡದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಆತಂಕಕ್ಕೆ ಕಾರಣವಾಗಿದ್ದು, ನಿವೃತ್ತ ಶಿಕ್ಷಕರೊಬ್ಬರ ಮನೆಯಲ್ಲಿ ಸಾಕಿದ್ದ ಐದು ಆಡುಗಳನ್ನು ಬೀದಿ ನಾಯಿಗಳ ಗುಂಪು ಕಚ್ಚಿ ಕೊಂದಿರುವ ಬಗ್ಗೆ ವರದಿಯಾಗಿದೆ.

ಅಚ್ಚಡದ ನಿವೃತ್ತ ಶಿಕ್ಷಕ ವಿಠಲ ಮಾಸ್ಟರ್ ಅವರ ಮನೆಯ ಹಟ್ಟಿಗೆ ನುಗ್ಗಿದ ಬೀದಿ ನಾಯಿಗಳ ಗುಂಪು ಐದು ಆಡುಗಳನ್ನು ಕಚ್ಚಿ ಕೊಂದಿದ್ದು, ಕೆಲವು ಆಡುಗಳನ್ನು ಎಳೆದೊಯ್ದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇದೇ ನಾಯಿಗಳ ಗುಂಪು ಕೆಲ ದಿನಗಳ ಹಿಂದೆ ಮನೆಯ ಕೋಳಿ ಹಾಗೂ ಟರ್ಕಿ ಕೋಳಿಗಳ ಮೇಲೂ ದಾಳಿ ನಡೆಸಿ ಹಾನಿ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.

ಅಚ್ಚಡ ಮಲೆ ಜುಮಾದಿ ದೇವಸ್ಥಾನದ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೇ ರಸ್ತೆಯಲ್ಲಿ ಅಂಗನವಾಡಿ ಮಕ್ಕಳು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಪ್ರತಿದಿನ ಸಂಚರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಬೀದಿ ನಾಯಿಗಳ ಹಾವಳಿ ಕುರಿತು ಗ್ರಾಮಸಭೆಯಲ್ಲಿ ಹಲವು ಬಾರಿ ದೂರು ನೀಡಿದ್ದರೂ ಕಟಪಾಡಿ ಗ್ರಾಮ ಪಂಚಾಯಿತಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮತ್ತೊಂದು ಅನಾಹುತ ಸಂಭವಿಸುವ ಮುನ್ನವೇ ಬೀದಿ ನಾಯಿಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಪಂಚಾಯಿತಿಯನ್ನು ಆಗ್ರಹಿಸಿದ್ದಾರೆ.