ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆ

ಕುಂದಾಪುರ: ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು ಮತ್ತು ನಡಂಬಳ್ಳಿ ನಡುವಿನ ಮೂಡಲಕಟ್ಟೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆಯಾಗಿದೆ.

ಮೂರು ಅಡಿ ಎತ್ತರ ಮತ್ತು ಎರಡು ಅಡಿ ಅಗಲವಿರುವ, ಸಂಪೂರ್ಣವಾಗಿ ಸವೆದು ಹೋಗಿರುವ ಸ್ಥಿತಿಯಲ್ಲಿರುವ ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿರುವ ಈ ಶಾಸನವನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಒಟ್ಟು 24 ಸಾಲುಗಳಿವೆ. ಶಾಸನವು ‘ಶ್ರೀ ಗಣಾಧಿಪತಯೇ ನಮಃ’ ಶ್ಲೋಕದಿಂದ ಪ್ರಾರಂಭವಾಗುತ್ತದೆ ಮತ್ತಿದು ಕ್ರಿ.ಶ 1353 ಅಥವಾ 1431 ವರ್ಷಗಳ ಹಿಂದಿನದ್ದೆಂದು ಅಂದಾಜಿಸಲಾಗಿದೆ.

ಶಿಲಾಫಲಕದಲ್ಲಿ ಲಭ್ಯವಿರುವ ಮಾಹಿತಿಯಂತೆ ಇಮ್ಮಡಿ ದೇವರಾಯನ ನಿಯೋಜನೆಯಲ್ಲಿ ಮಹಾಪ್ರಧಾನ ಚಂದರಸ ಒಡೆಯರ್ ಬಾರಕೂರನ್ನು ಆಳುತ್ತಿದ್ದನು. ಮೂರು ದಿನಗಳ ದೇವರ ಉತ್ಸವಕ್ಕೆ ದಾನ ನೀಡಿರುವುದನ್ನು ಈ ಶಾಸನವು ಉಲ್ಲೇಖಿಸುತ್ತದೆ. ಮಂಜಣ್ಣ ಸೆಟ್ಟಿ, ಅವರ ಅಳಿಯ ಕೋಮ ಸೆಟ್ಟಿ ಮತ್ತು ಗ್ರಾಮದ ಇತರ ಏಳು ಜನರ ಹೆಸರುಗಳನ್ನು ದೇವಸ್ಥಾನದ ದಾನಿಗಳೆಂದು ಉಲ್ಲೇಖಿಸಲಾಗಿದೆ. ಶಾಸನಗಳ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.

ಗುಂಡು ಶೆಟ್ಟಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಶಾಸನ ಪತ್ತೆಯಾಗಿವೆ. ಆನಂದ ಬಂಗೇರ ಮತ್ತು ಸ್ಥಳೀಯರು ಈ ಶಾಸನವನ್ನು ಹುಡುಕುವಲ್ಲಿ ಸಹಾಯ ಮಾಡಿದ್ದಾರೆ. ಪುರಾತತ್ವ ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಹಾಗೂ ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ.ಶ್ರೀಧರ್ ಭಟ್ ನೇತೃತ್ವದಲ್ಲಿ ಸಂಶೋಧನಾ ವಿದ್ಯಾರ್ಥಿ ಶ್ರುತೇಶ್ ಆಚಾರ್ಯ ಶಿಲಾಶಾಸನಗಳ ಅಧ್ಯಯನ ನಡೆಸಿದ್ದಾರೆ.