ಉಡುಪಿ: ಉಡುಪಿ ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ವಿಧಿಸಲಾಗಿರುವ ತಡೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಗ್ರಹಿಸಿದರು.
ಕಂಬಳ ಆಯೋಜನೆಗೆ ತಡೆ ವಿಧಿಸಿರುವ ಕ್ರಮವನ್ನು ವಿರೋಧಿಸಿದ ಅವರು, ಕರಾವಳಿಯ ಸಂಪ್ರದಾಯ, ಸಂಸ್ಕೃತಿ ಹಾಗೂ ಜನರ ಭಾವನೆಗಳಿಗೆ ಸಂಬಂಧಿಸಿದ ಕಂಬಳಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.
ಕರಾವಳಿಯ ಸಾಂಪ್ರದಾಯಿಕ ಕಂಬಳಗಳಿಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕೋರ್ಟ್ ಆದೇಶವನ್ನು ಹಿಂಪಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಕರಾವಳಿಯ ಕಂಬಳಕ್ಕೆ ನ್ಯಾಯ ದೊರಕುವಂತೆ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.















