ಉಡುಪಿ: ಅಧಿಕಾರಕ್ಕೆ ಏರಲೇಬೇಕೆಂಬ ಹಪಾಹಪಿಯಿಂದ ಕಾಂಗ್ರೆಸ್ ಪಕ್ಷ ಘೋಷಿಸಿದ್ದ 5 ಉಚಿತಗಳ ಗ್ಯಾರಂಟಿಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದ್ದು, ಇದೀಗ ಎಸ್ಸಿ ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಸುಮಾರು 11,000 ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡುವ ನಿರ್ಧಾರ ಕೈಗೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮಹಾ ಮೋಸ ಎಸಗಿರುವುದನ್ನು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ತೀವ್ರವಾಗಿ ಖಂಡಿಸಿದರು.
ಅವರು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನತೆಯನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಯಾವುದೇ ಗ್ಯಾರಂಟಿಗಳನ್ನೂ ಯಥಾವತ್ತಾಗಿ ಜಾರಿಗೊಳಿಸದೆ, ಬೆಲೆ ಏರಿಕೆಯ 6ನೇ ಗ್ಯಾರಂಟಿ ನೀಡುವ ಜೊತೆಗೆ ದಲಿತರ ಸಹಿತ ರಾಜ್ಯದ ಸಮಸ್ತ ಜನತೆಗೆ ದ್ರೋಹ ಎಸಗಿದೆ ಎಂದರು.
ದಲಿತರಿಗೆ ವಿಶೇಷ ಯೋಜನೆ ರೂಪಿಸಿ ಸಾವಿರಾರು ಕೋಟಿ ರೂಪಾಯಿ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾ, ಅಂತಹ ಯೋಜನೆಯ ಹಣವನ್ನು ಮೆಟ್ರೋ ರೈಲು, ಕೆರೆಗಳ ಹೂಳೆತ್ತಲು ಮತ್ತು PWD ರಸ್ತೆ ನಿರ್ಮಿಸಲು ನೀಡಿ ದಲಿತರನ್ನು ವಂಚಿಸಿದ್ದಾರೆ. SCSP/TSP ಅಡಿಯಲ್ಲಿ 7ಡಿ ಎಂಬ ಕಾನೂನನ್ನಿಟ್ಟು ಹಿಂದಿನ ಅವಧಿಯಲ್ಲಿ ವಂಚಿಸಿದ ಸಿದ್ದರಾಮಯ್ಯ ನಂತರ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು ಎಂದು ದೂರಿದರು.
ಹಿಂದಿನ ಬಿಜೆಪಿ ಸರ್ಕಾರ 7ಡಿ ಕಾನೂನನ್ನು ವಜಾಗೊಳಿಸಿ, ದಲಿತರ SCSP/TSP ಹಣ ದಲಿತರ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ವಿನಿಯೋಗವಾಗಬೇಕೆಂದು ಬಜೆಟ್ ನಲ್ಲಿ ಮಂಡಿಸಿರುವುದನ್ನು ಸಹಿಸಲಾರದೆ, ಇಂದಿನ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಮೀಸಲಿಡಲಾಗಿರುವ ಹಣದಲ್ಲಿ ರೂಪಾಯಿ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುವ ನಿರ್ಣಯ ಕೈಗೊಂಡಿರುವುದು ಕಪಟ ಅಹಿಂದ ಜಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಎಸ್ಸಿ ಎಸ್ಟಿ ಸಮುದಾಯಗಳಿಗೆ ಮಾಡಿರುವ ಅಕ್ಷಮ್ಯ ದ್ರೋಹವಾಗಿದೆ ಎಂದರು.
ರಾಜ್ಯ ಸರಕಾರ SCSP/TSP ಯೋಜನೆಗೆ 34 ಸಾವಿರ ಕೋಟಿ ಬದಲು ಕೇವಲ 23 ಸಾವಿರ ಕೋಟಿ ರೂಪಾಯಿಗೆ ಅನುಮೋದನೆ ನೀಡಿದಂತಾಗಿದ್ದು, ಇದು SCSP ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪನವರು ಕೂಡ ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯಕ್ಕೆ ಎಸಗಿರುವ ದ್ರೋಹವಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರ ಹಾಸ್ಟೆಲ್ ನಿರ್ಮಾಣ ಹಾಗೂ ವಸತಿ ಶಾಲೆ ನಿರ್ಮಾಣಕ್ಕೂ ಚಿಕ್ಕಾಸು ಬಿಡುಗಡೆ ಮಾಡಿಲ್ಲ. ಪ್ರಸಕ್ತ 156 ವಸತಿ ಶಾಲೆಗಳ ಹಾಗೂ 75 ಹಾಸ್ಟೆಲ್ ಗಳ ಕಟ್ಟಡಗಳ ಕಾಮಗಾರಿ ಸ್ಥಗಿತಗೊಂಡಿದೆ. ಬಿಜೆಪಿ ಸರಕಾರ 108 ವಸತಿ ಶಾಲೆಗಳಿಗೆ, ಪ್ರತಿ ಶಾಲೆಗೆ 10 ಎಕರೆಯಷ್ಟು ಭೂಮಿಯನ್ನು ನೀಡಿದ್ದರೂ, ಅವುಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರ ಹಣ ಮಂಜೂರು ಮಾಡದೇ ಇರುವುದು ಈ ಸರಕಾರಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ಮೇಲಿರುವ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ದಲಿತರಿಗೆ ಮಾಡುತ್ತಿರುವ ಈ ಅನ್ಯಾಯವನ್ನು ಖಂಡಿಸಿ, ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ವತಿಯಿಂದ ಆ.4, ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಕೇಂದ್ರದಲ್ಲಿಯೂ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಆ.4ರ ಬೆಳಿಗ್ಗೆ 10.30ಕ್ಕೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ದಿನಕರ ಬಾಬು ತಿಳಿಸಿದರು.
ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜೆ, ಉಪಾಧ್ಯಕ್ಷ ಆನಂದ ಮಟಪಾಡಿ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ ಕೈಪುಂಜಾಲು, ಎಸ್ಸಿ ಮೋರ್ಚಾ ಬೈಂದೂರು ಮಂಡಲಾಧ್ಯಕ್ಷ ಚಂದ್ರ ಪಂಚವಟಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.