ಮಲ್ಪೆಯಲ್ಲಿ ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಉದ್ಘಾಟನೆ

ಉಡುಪಿ: ಸಮುದ್ರದಲ್ಲಿ ತೇಲುವ ರಾಜ್ಯದ ಪ್ರಪ್ರಥಮ ತೇಲುವ ಸೇತುವೆಯನ್ನು ಮಲ್ಪೆ ಬೀಚ್ ನಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಶುಕ್ರವಾರದಂದು ಉದ್ಘಾಟಿಸಿದರು.

ಮಲ್ಪೆ ಸಮುದ್ರ ತೀರವು ಈಗಾಗಲೇ ದೇಶ ವಿದೇಶದ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು, ಪ್ರಸ್ತುತ ನಿರ್ಮಾಣಗೊಂಡಿರುವ ಸಮುದ್ರದಲ್ಲಿ ತೇಲುವ ಸೇತುವೆಯು ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ. ಪ್ರವಾಸಿಗರನ್ನು ಆಕರ್ಷಿಸುವುದು ಮಾತ್ರವಲ್ಲದೇ, ಭದ್ರತೆಯನ್ನು ಒದಗಿಸುವುದು ಕೂಡಾ ನಮ್ಮ ಕರ್ತವ್ಯವಾಗಿದ್ದು, ಫ್ಲೋಟಿಂಗ್ ಬ್ರಿಡ್ಜ್ ಯೋಜನೆಯ ಆರಂಭದಲ್ಲೇ 20 ರಿಂದ 25 ಲೈಫ್ ಗಾರ್ಡ್ಗಳ ನೇಮಕ ಮಾಡಲಾಗುವುದು ಎಂದು ಹೇಳಿದರು.

ಹೊಸತನ ಇದ್ದಾಗ ಮಾತ್ರ ಪ್ರವಾಸಿಗರು ಹೆಚ್ಚು ಆಕರ್ಷಿತರಾಗುತ್ತಾರೆ. ಮಲ್ಪೆಯ ಕಡಲತಡಿಯಲ್ಲಿ ಈಗಾಗಲೇ ಪ್ಯಾರಾಚೂಟ್ ಕೂಡಾ ಇದ್ದು, ಪ್ರವಾಸಿಗರು ಇದರಿಂದ ಸಾಕಷ್ಟು ಮನೋರಂಜನೆ ಪಡೆಯುತ್ತಿದ್ದಾರೆ. ಈಗ ನಿರ್ಮಿಸಲಾದ ಫ್ಲೋಟಿಂಗ್ ಬ್ರಿಡ್ಜ್ ನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಪೆ ಬೀಚ್‌ಗೆ ಭೇಟಿ ನೀಡಲಿದ್ದಾರೆ.

ಸ್ಥಳೀಯ ಯುವಕರು ಪ್ರವಾಸಿಗರಿಗೆ ಗರಿಷ್ಠ ಭದ್ರತೆಯೊಂದಿಗೆ ಸಂತೋಷ ನೀಡುವ ಹೊಸ ಯೋಜನೆಗಳನ್ನು ಆರಂಭಿಸಲು ಬಯಸಿದಲ್ಲಿ, ಜಿಲ್ಲಾಡಳಿತ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು. ಇದರಿಂದ ಪ್ರವಾಸಿಗರಿಗೆ ಮನೋರಂಜನೆ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ದೊರೆತಂತಾಗುತ್ತದೆ. ಹಾಗಾಗಿ ಇಂತಹ ಆವಿಷ್ಕಾರಗಳು ಹೆಚ್ಚಾಗಿ ಜಾರಿಗೆ ಬರಬೇಕು ಎಂದರು.

ಪ್ರವಾಸಿಗರ ಭದ್ರತೆಯ ದೃಷ್ಟಿಯಿಂದ ಎರಡು ಜೆಟ್ ಸ್ಕೀ ಗಳನ್ನು ಜಿಲ್ಲಾಡಳಿತದ ವತಿಯಿಂದ ಖರೀದಿಸಿ, ಸೈಂಟ್ ಮೆರೀಸ್ ಮತ್ತು ಮಲ್ಪೆ ಬೀಚ್‌ನಲ್ಲಿ ರಕ್ಷಣೆಗೆ ಬಳಸಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷ ಲಕ್ಷ್ಮಿ ಮಂಜುನಾಥ್, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಮಂಜು ಕೊಳ, ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ, ಶೇಖರ್ ಪುತ್ರನ್, ಧನಂಜಯ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.