ಬೆಂಗಳೂರು: ಫ್ಯಾನ್ಸಿ ನಂಬರ್ಗಳ ಹರಾಜಿನ ಮೂಲಕ ಅಧಿಕ ಆದಾಯ ಗಳಿಸುತ್ತಿರುವ ರಾಜ್ಯ ಸಾರಿಗೆ ಇಲಾಖೆಯು ‘ಕೆಎ 50 ಎಂಡಿ’ ಸರಣಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 18ರಂದು ಹರಾಜು ಆರಂಭವಾಗಲಿದೆ. ಈ ಬಾರಿ ಕೂಡ ಸಾರಿಗೆ ಇಲಾಖೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಇದೆ.
ಸಾರಿಗೆ ಇಲಾಖೆಯು ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರ ನಿಯಮ 46 (ಎಎ) 1 ರಿಂದ 999 ರ ನಡುವಿನ ಲಘು ಮೋಟಾರು ವಾಹನಗಳಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.
ಈ ಬಾರಿ ‘ಕೆಎ 50 ಎಂಡಿ’ ಸರಣಿಯ ಹರಾಜು ಪ್ರಕ್ರಿಯೆಯು ಏ.18ರಂದು ಮಧ್ಯಾಹ್ನ 12 ಗಂಟೆಗೆ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ. ಆಸಕ್ತರು ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು. ಈ ಹೆಸರಿನಲ್ಲಿ 75,000 ರೂ. ಡಿಮ್ಯಾಂಡ್ ಡ್ರಾಫ್ಟ್ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಜೊತೆ ಡಿಡಿ ಯನ್ನು ಏಪ್ರಿಲ್ 18ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬೇಕು.
ಅರ್ಜಿದಾರರಿಗೆ ಟೋಕನ್ ನೀಡಲಾಗುವುದು. ಯಶಸ್ವಿ ಬಿಡ್ದಾರರು ಎರಡು ಕೆಲಸದ ದಿನಗಳಲ್ಲಿ ಒಟ್ಟು ಬಿಡ್ ಮೊತ್ತವನ್ನು ಡಿಡಿ ರೂಪದಲ್ಲಿ ಪಾವತಿಸಬೇಕು ಮತ್ತು 90 ದಿನಗಳಲ್ಲಿ ವಾಹನವನ್ನು ನೋಂದಾಯಿಸಿಕೊಳ್ಳಬೇಕು, ವಿಫಲವಾದರೆ ಬಿಡ್ಡಿಂಗ್ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.












