ಕೊಲ್ಲೂರು: ರಾಜ್ಯ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಮಂಗಳವಾರ ಬೆಳಿಗ್ಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರ ರಾತ್ರಿ ಕೊಲ್ಲೂರಿಗೆ ಆಗಮಿಸಿ ವಾಸ್ತವ್ಯವಿದ್ದ ಸಚಿವರು ಮಂಗಳವಾರ ಚಂಡಿಕಾಹೋಮ ಸೇವೆ ನೆರವೇರಿಸಿದರು. ದೇವಾಲಯದ ವತಿಯಿಂದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಸಚಿವರಿಗೆ ಶ್ರೀದೇವಿಯ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಈ ವೇಳೆ ಸಚಿವರೊಂದಿಗೆ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿ ನವಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ, ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಬೈಂದೂರು ತಾಲೂಕು ಕೆಡಿಪಿ ಸದಸ್ಯ ಜಗದೀಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.















