ಹೆಬ್ರಿ: ಗ್ರಾಮೀಣ ಪ್ರತಿಭೆಗೆಗಳು ಬೆಳಕಿಗೆ ಬರಬೇಕಾದರೆ ಅವಕಾಶ ಮತ್ತು ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ನಿರಂತರವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಿ ಪ್ರತಿಭೆಗಳ ಅನಾವರಣ ಮಾಡುತ್ತಿರುವುದು ಶ್ಲಾಘನೀಯ ಎಂದು ಉದ್ಯಮಿ ಶಶಿಕಾಂತ್ ಶೆಟ್ಟಿಗಾರ್ ಹೇಳಿದರು.
ಅವರು ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ಇವರ ನೇತೃತ್ವದಲ್ಲಿ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯುವ ವಾಯ್ಸ್ ಆಪ್ ಚಾಣಕ್ಯ 2025 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಸೀಸನ್ 8ರ ಆಯ್ಕೆ ಪ್ರಕ್ರಿಯೆಯನ್ನು ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ವಹಿಸಿ ಮಾತನಾಡಿ ಹೆತ್ತವರು ತಮ್ಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತವಾದ ತರಬೇತಿಯನ್ನು ನೀಡಿ ಅವರಲ್ಲಿರುವ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದರು. ಸಮಾರಂಭದಲ್ಲಿ ಸಂಗೀತ ಗುರುಗಳಾದ ಕೃಷ್ಣ ಕಾಮತ್ ಹಾಲಾಡಿ, ಸ್ಮಿತಾ ಭಟ್ ಉಡುಪಿ, ಸಂಗೀತ ನಿರ್ದೇಶಕ ರಮೇಶ್ ಡಿ ಚಾಂತಾರು, ಚಾಣಕ್ಯ ಮೆಲೋಡಿಸ್ ನ ಗಾಯಕ ಪ್ರಸನ್ನ ಮುನಿಯಾಲು ಮೊದಲಾದವರು ಉಪಸ್ಥಿತರಿದ್ದರು. ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















