ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಮನೋಜ್ ಕಡಬ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ

ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ), ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಸಮಿತಿ, ಅಂಬಲಪಾಡಿ ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ 5 ಮಂಗಳವಾರದಂದು ಅಂಬಲಪಾಡಿಯಲ್ಲಿ ನಡೆಯಲಿರುವ ಶಿಕ್ಷಕ ಸಾಹಿತಿಗಳ ಆರನೇಯ ಸಮ್ಮೇಳನ ಸಂಭ್ರಮ ಕಾರ್ಯಕ್ರಮದಲ್ಲಿ ಉಡುಪಿಯ ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿಯ ನಿರ್ದೇಶಕ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತುದಾರ ಮನೋಜ್ ಕಡಬ ಇವರು ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನವನ್ನು ಆರಂಭಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಬಹುದೊಡ್ಡ ಕೆಲಸವನ್ನು ಮಾಡುತ್ತಿರುವ ಕಾರ್ಯಕ್ಕಾಗಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.

“ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸರಕಾರಿ ಮತ್ತು ಅನುದಾನಿತ ಶಾಲೆಗಳ ಅತಿಥಿ ಹಾಗೂ ಗೌರವ ಶಿಕ್ಷಕಿಯರಿಗೆ ಹಾಗೂ ಮಕ್ಕಳಿಗೆ ವರ್ಷ ಪೂರ್ತಿ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡುವ ಮೂಲಕ ಅವರೆಲ್ಲರ ಬಾಳಿಗೆ ದೀಪವಾಗುವ ಹಾಗೂ ಅಲ್ಲಿನ ಮಕ್ಕಳು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕಾಣುವ ನೆರೆಮನೆಯ ಮಕ್ಕಳೂ ಕನ್ನಡ ಮಾಧ್ಯಮ ಶಾಲೆಗಳತ್ತ ಆಕರ್ಷಿತರಾಗಿ, ಶಾಲೆಗಳ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿ ಈ ಆಂದೋಲನವನ್ನು ಮಾಡುತ್ತಿದ್ದು, ಇಂತಹ ಕಾರ್ಯಕ್ಕಾಗಿ ಶಿಕ್ಷಕರ ದಿನಾಚರಣೆಯಂದು ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಶಿಕ್ಷಣಾಧಿಕಾರಿಗಳ ಅನುಮತಿಯೊಂದಿಗೆ ಮಾಡುತ್ತಿರುವ ಈ ಆಂದೋಲನಕ್ಕೆ ಶಿಕ್ಷಕರ, ಶಾಲಾಭಿವೃದ್ಧಿ ಮಂಡಳಿಯ, ಹಳೆ ವಿದ್ಯಾರ್ಥಿಗಳ ಮತ್ತು ಸಂಘ-ಸಂಸ್ಥೆಗಳ ಸಹಕಾರವಿದ್ದಲ್ಲಿ ಮಾತ್ರ ಈ ಕೆಲಸ ಸಾಧ್ಯ” ಎಂದು ಮನೋಜ್ ಕಡಬ ಹೇಳುತ್ತಾರೆ.