ರಾಜ್ಯದಲ್ಲಿ ಮಳೆಯಿಂದ ಪ್ರಾಥಮಿಕವಾಗಿ ಅಂದಾಜು 4 ಸಾವಿರ ಕೋಟಿ ಹಾನಿ: ಪ್ರಧಾನಿ ಮೋದಿಗೆ ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ ಪ್ರಾಥಮಿಕ ಹಂತದಲ್ಲಿ 4000 ಸಾವಿರ ಕೋಟಿ ಹಾನಿ ಸಂಭವಿಸಿದೆಂದು ಅಂದಾಜಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಮಳೆ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಮಾಹಿತಿ ನೀಡಿದರು.
ನೆರೆಪೀಡಿತ ಪ್ರದೇಶಗಳ ಬಗ್ಗೆ ಪ್ರಧಾನಿ ಮಾಹಿತಿ ಪಡೆದಿದ್ದಾರೆ. ಅತಿ ಹೆಚ್ಚು ಮಳೆಯಾಗಿರುವ ಬಗ್ಗೆ ಪ್ರಧಾನಿಯ ಗಮನಕ್ಕೆ ತಂದಿದ್ದೇವೆ.
ಪಶ್ಚಿಮ ಘಟ್ಟಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇದರಿಂದ ನದಿಗಳು ಉಕ್ಕಿ ಹರಿಯುತ್ತಿರುವ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೂನ್, ಜುಲೈ ಹಾಗೂ ಕಳೆದ ಒಂದು ವಾರದಿಂದ ಹೆಚ್ಚು ಮಳೆಯಾಗುತ್ತಿದೆ. ಮಡಿಕೇರಿ, ಕರಾವಳಿ, ಹಾವೇರಿ, ಬೆಳಗಾವಿ, ಧಾರವಾಡ, ರಾಯಚೂರಿನಲ್ಲಿ ಹೆಚ್ಚು ಮಳೆಯಾಗಿದೆ. ಭಾಗಮಂಡಲದಲ್ಲಿ ವಾಡಿಕೆಗಿಂತ ಶೇ. 500 ಪಟ್ಟು ಹೆಚ್ಚು ಮಳೆಯಾಗಿದೆ. ಇದರಿಂದ ರಾಜ್ಯದ 56 ತಾಲ್ಲೂಕುಗಳಲ್ಲಿ ಪ್ರವಾಹ ಉಂಟಾಗಿದೆ. 885 ಗ್ರಾಮಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದೆ. ಮೂರು ಸಾವಿರ ಮನೆಗಳು ಬಿದ್ದಿದೆ. 80 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದೆ. 3,500 ಕಿ. ಮೀ ರಸ್ತೆಗೆ ಮಳೆ ಹಾಗೂ ಭೂಕುಸಿದಿಂದ ಹಾನಿಯಾಗಿದೆ. 293 ಸೇತುವೆ, 390 ಕಟ್ಟಡಗಳಿಗೆ ಹಾನಿಯಾಗಿದೆ. ಹಾಗೆ ರಸ್ತೆ, ಸರ್ಕಾರಿ ಕಟ್ಟಡ, ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಒಟ್ಟು ಮಳೆಯಿಂದ ಪ್ರಾಥಮಿಕವಾಗಿ 4 ಸಾವಿರ ಕೋಟಿಯಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದೇವೆ ಎಂದರು.
ಕೇಂದ್ರ ಸರ್ಕಾರ ನಾಲ್ಕು ರಕ್ಷಣಾ ಹೆಲಿಕಾಪ್ಟರ್ ಹಾಗೂ ರಕ್ಷಣಾ ಸಿಬ್ಬಂದಿಯನ್ನು ಮೀಸಲಿಟ್ಟಿದೆ. ಯಾವಾಗ ಅಗತ್ಯ ಬೀಳುತ್ತೋ ಆಗ ಬಳಸಿಕೊಳ್ಳಬಹುದು ಎಂದು ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಇದ್ದರು.