ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರಕಾರ ಪೊಲೀಸ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ: ಶಾಸಕ ಸುನಿಲ್ ಕುಮಾರ್

ಉಡುಪಿ, ಜೂನ್ 2: ಕರ್ನಾಟಕ ಕಾಂಗ್ರೆಸ್ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದು, ಖುದ್ದು ರಾಜ್ಯ ಸರ್ಕಾರವೇ ‘‘ದ್ವೇಷ ಭಾಷೆ’’ಯ ಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಆರ್​ಎಸ್​​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಿಂದು ಸಂಘಟನೆಗಳ 15 ಮಂದಿ ವಿರುದ್ಧ ಮಂಗಳೂರಿನಲ್ಲಿ ಎಫ್​ಐಆರ್ ದಾಖಲಾದ ಬೆನ್ನಲ್ಲೇ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಅವರು ಸಂದೇಶ ಪ್ರಕಟಿಸಿದ್ದಾರೆ. ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನಾಡಿದವರ ಮೇಲೆ ಕ್ರಮ ಏಕಿಲ್ಲ? ಕೇವಲ ಹಿಂದೂಗಳ ವಿರುದ್ಧ ಮಾತ್ರ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಸಿರುವ ಅವರು, ಸರ್ಕಾರದ ಈ ಏಕಪಕ್ಷೀಯ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ‘ಪೊಲೀಸ್ ರಾಜ್’ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ. ದ್ವೇಷ ಭಾಷಣ ನಿಯಂತ್ರಣ ನೆಪದಲ್ಲಿ ಕಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡವರ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ಖುದ್ದು ರಾಜ್ಯ ಸರ್ಕಾರವೇ ‘ದ್ವೇಷ ಭಾಷೆ’ಯ ಪ್ರಚಾರ ನಡೆಸುತ್ತಿದ್ದು, ನಿರ್ದಾಕ್ಷಿಣ್ಯ ಕ್ರಮವನ್ನು ಹಿಂದು ಸಂಘಟನೆಗೆ ಸೀಮಿತಗೊಳಿಸುತ್ತಿದೆ. ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಹಾಗೂ ಹಿಂಸೆಗೆ ಪ್ರೇರಣೆ ನೀಡಿದವರು ಯಾರು? ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನು ಆಡಿದವರನ್ನು ಪೊಲೀಸರು ಏಕೆ ಮುಟ್ಟುತ್ತಿಲ್ಲ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ರವಾನಿಸಿದವರ ಮೇಲೆ ಮಾತ್ರ ನಿಮ್ಮ ಕಾನೂನು‌ ಕ್ರಮವೇ ಎಂದು ಸುನೀಲ್ ಕುಮಾರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅರುಣ್ ಭಾನುವಾರವೇ ಕಟ್ಟುನಿಟ್ಟಿನ ಕ್ರಮ ಆರಂಭಿಸಿದ್ದು, ಖುದ್ದು ಕಾರ್ಯಾಚರಣೆಗೆ ಇಳಿದಿದ್ದರು. ಅದರ ಬೆನ್ನಲ್ಲೇ, ಕಲ್ಲಡ್ಕ ಪ್ರಭಾಕರ ಭಟ್ ಸೇರಿ 15 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಅತ್ತ ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕಲಬುರಗಿಯ ಶಹಾಬಾದ್​ಗೆ ಗಡೀಪಾರು ಮಾಡಿ ನೋಟಿಸ್ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.