ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರಾಜ್ಯ ಆರೋಗ್ಯ ಇಲಾಖೆಯು ಕೋವಿಡ್ ಪಾಸಿಟಿವ್ ರೋಗಿಗಳಿಗೆ ಏಳು ದಿನಗಳ ಹೋಮ್ ಐಸೋಲೇಶನ್ ಅನ್ನು ಕಡ್ಡಾಯಗೊಳಿಸಿದೆ. ಪ್ರಸ್ತುತ, ರಾಜ್ಯವು JN.1 ರೂಪಾಂತರದ 34 ಪ್ರಕರಣಗಳನ್ನು ಹೊಂದಿದೆ.
ಸುದ್ದಿ ಸಂಸ್ಥೆ ಎ.ಎನ್.ಐ ಯೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್, ಸರ್ಕಾರವು ಉತ್ತಮ ಸಿದ್ಧತೆಯನ್ನು ಹೊಂದಿದೆ ಮತ್ತು ಯಾವುದೇ “ಆತಂಕಕಾರಿ” ಬೆಳವಣಿಗೆ ಇಲ್ಲ ಎಂದು ಹೇಳಿದ್ದಾರೆ.
430 ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 400 ಹೋಂ ಐಸೋಲೇಶನ್ ನಲ್ಲಿದೆ ಮತ್ತು ಉಳಿದವರು ಆಸ್ಪತ್ರೆಯಲ್ಲಿದ್ದಾರೆ. 7-8 ರೋಗಿಗಳು ಐಸಿಯುನಲ್ಲಿದ್ದಾರೆ. ಸದ್ಯಕ್ಕೆ, ಪರಿಸ್ಥಿತಿ ಸರಿಯಾಗಿದೆ. ನಾವು ಜೀನೋಮ್ ಸೀಕ್ವೆನ್ಸಿಂಗ್ ಮಾಡಿದ್ದೇವೆ. ಕೋವಿಡ್ ನ JN.1 ರೂಪಾಂತರದ 34 ಪ್ರಕರಣಗಳಿವೆ. ನಾವು ಚೆನ್ನಾಗಿ ತಯಾರಾಗಿದ್ದೇವೆ. ಯಾವುದಕ್ಕೂ ಭಯಪಡಬೇಕಾಗಿಲ್ಲ. ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆಯೂ ಅವರು ಸಲಹೆ ನೀಡಿದ್ದಾರೆ.
ಏತನ್ಮಧ್ಯೆ, ದ.ಕ ಜಿಲ್ಲೆಯಲ್ಲಿ ಕ್ರಿಸ್ಮಸ್ ದಿನದಂದು 5 ಪ್ರಕರಣಗಳು ದೃಢಪಟ್ಟಿವೆ. ದುರದೃಷ್ಟವಶಾತ್, ಬೆಂಗಳೂರಿನಲ್ಲಿ ನೆಲೆಸಿರುವ ಪುತ್ತೂರಿನ ನಿವಾಸಿಯೊಬ್ಬರು ವೈರಸ್ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ಎರಡಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳಿವೆ, ಮೂವರು ವ್ಯಕ್ತಿಗಳು ತೀವ್ರ ನಿಗಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇಬ್ಬರು ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಒಬ್ಬರು ವೆನ್ಲಾಕ್ನಲ್ಲಿದ್ದಾರೆ. ಇನ್ನು ಇಬ್ಬರ ಮೇಲೆ ಮನೆಯಲ್ಲಿ ನಿಗಾ ಇರಿಸಲಾಗಿದೆ.
ಉಡುಪಿಯಲ್ಲಿ ಸೋಮವಾರ ಪರೀಕ್ಷೆಗೆ ಒಳಪಟ್ಟ 94 ವ್ಯಕ್ತಿಗಳಲ್ಲಿ ಯಾವುದೇ ಹೊಸ ಸೋಂಕುಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಮುಕ್ತ ಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ.