ಇಂದಿನಿಂದ ಮರಳುನಾಡಿನಲ್ಲಿ ಐಪಿಎಲ್ ಜಾತ್ರೆ ಶುರು: ಉದ್ಘಾಟನಾ ಪಂದ್ಯದಲ್ಲಿ ಮುಂಬೈ- ಚೆನ್ನೈ ತಂಡಗಳ ಸೆಣಸಾಟ

ಅಬುಧಾಬಿ: ಕೊರೊನಾ ಆತಂಕ, ಅಡೆತಡೆಗಳ ನಡುವೆಯೇ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಉಣಬಡಿಸಲು ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 (ಐಪಿಎಲ್ ) ಕ್ರಿಕೆಟ್ ಟೂರ್ನಿ ಇಂದಿನಿಂದ ಶುರುವಾಗಲಿದೆ.

ಅಬುಧಾಬಿಯ ಅಲ್‌ ಝಯೀದ್ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಇದರೊಂದಿಗೆ 53 ದಿನಗಳ ಐಪಿಎಲ್‌ ಕ್ರಿಕೆಟ್ ಜಾತ್ರೆಗೆ ಚಾಲನೆ ದೊರೆಯಲಿದೆ.

ಪ್ರೇಕ್ಷಕರಿಲ್ಲದ ಜಾತ್ರೆ:
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳಿಗೆ ಜನರನ್ನು ನಿರ್ಬಂಧಿಸಲಾಗಿದ್ದು, ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಂಭ್ರಮ ಕಾಣಸಿಗುವುದಿಲ್ಲ. ಮಾರ್ಚ್‌–ಏಪ್ರಿಲ್‌ನಲ್ಲಿಯೇ ಟೂರ್ನಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಕೋವಿಡ್–19 ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ್ದರಿಂದ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟ್ವೆಂಟಿ–20 ಕ್ರಿಕೆಟ್‌ ವಿಶ್ವಕಪ್ ಮುಂದೂಡಿದ್ದರಿಂದ ಐಪಿಎಲ್‌ ಆಯೋಜನೆಗೆ ಸಹಕಾರಿಯಾಗಿದೆ.

ಈ ಬಾರಿಯ ಐಪಿಎಲ್ ದೂರದ ದುಬೈ, ಶಾರ್ಜಾ ಮತ್ತು ಅಬುಧಾಬಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ.
ಈ ಬಾರಿ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅಲಭ್ಯರಾಗಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡದಲ್ಲಿ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಇಲ್ಲ.
ಯುಎಇಯಲ್ಲಿ ಮುಂಬೈ ತಂಡದ ಈ ಹಿಂದಿನ ದಾಖಲೆಗಳು ಅಷ್ಟು ಚೆನ್ನಾಗಿಲ್ಲ. 2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳಿದ್ದ ಕಾರಣ ಯುಎಇಯಲ್ಲಿ ಐಪಿಎಲ್‌ನ ಕೆಲವು ಪಂದ್ಯಗಳನ್ನು ನಡೆಸಲಾಗಿತ್ತು. ಆಗ ಮುಂಬೈ ತಂಡವು ಆಡಿದ್ದ ಐದು ಪಂದ್ಯಗಳಲ್ಲಿಯೂ ಸೋಲು ಕಂಡಿತ್ತು. ಅದೇ ಚೆನ್ನೈ ತಂಡವು ನಾಲ್ಕು ಗೆದ್ದು ಒಂದರಲ್ಲಿ ಪರಾಭವಗೊಂಡಿತ್ತು.

ಹೋದ ವರ್ಷದ ಫೈನಲ್‌ನಲ್ಲಿ ಮುಂಬೈ ಎದುರು ಅನುಭವಿಸಿದ ಸೋಲಿನ ಸೇಡು ತೀರಿಸಿಕೊ ಳ್ಳಲು ಧೋನಿ ಪಡೆ ಕಾತರಿಸುತ್ತಿದೆ. ಆದರೆ ತನ್ನ ಜಯದ ಓಟವನ್ನು ಇಲ್ಲಿಂದಲೇ ಆರಂಭಿಸಲು ರೋಹಿತ್ ಪಡೆ ಕೂಡ ಸಿದ್ಧವಾಗಿದೆ. ಹಾಗಾಗಿ ಉಭಯ ತಂಡಗಳ ರೋಚಕ ಹಣಾಹಣಿಗೆ ಇಂದಿನ ಉದ್ಘಾಟನಾ ಪಂದ್ಯ ವೇದಿಕೆಯಾಗಲಿದೆ.
ತಂಡಗಳು ಇಂತಿವೆ:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಆದಿತ್ಯ ತಾರೆ (ವಿಕೆಟ್‌ಕೀಪರ್), ದಿಗ್ವಿಜಯ ದೇಶಮುಖ, ಸೌರಭ್ ತಿವಾರಿ, ಜಸ್‌ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ರಾಹುಲ್ ಚಾಹರ್, ಕ್ರಿಸ್ ಲಿನ್, ಹಾರ್ದಿಕ್ ಪಾಂಡ್ಯ, ಶೆರ್ಫಾನ್ ರುದರ್‌ಫೋರ್ಡ್, ಅನ್ಮೋಲ್‌ಪ್ರೀತ್ ಸಿಂಗ್, ಮೊಹಸಿನ್ ಖಾನ್, ಮಿಚೆಲ್ ಮೆಕ್ಲೆಂಗಾನ್, ಪ್ರಿನ್ಸ್‌ ಬಲವಂತ್ ರಾಯ್, ಅನುಕೂಲ್ ರಾಯ್, ಇಶಾನ್ ಕಿಶನ್, ನೇಥನ್ ಕೌಲ್ಟರ್‌ ನೈಲ್, ಜೇಮ್ಸ್‌ ಪ್ಯಾಟಿನ್ಸನ್.

ಚೆನ್ನೈ ಸೂಪರ್ ಕಿಂಗ್ಸ್‌: 
ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್‌ಕೀಪರ್), ಶೇನ್ ವಾಟ್ಸನ್, ಡ್ವೇನ್ ಬ್ರಾವೊ, ಫಾಫ್ ಡು ಪ್ಲೆಸಿ, ಕೇದಾರ್ ಜಾಧವ್, ರವೀಂದ್ರ ಜಡೇಜ, ಪಿಯೂಷ್ ಚಾವ್ಲಾ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕೆ.ಎಂ. ಆಸಿಫ್, ಇಮ್ರಾನ್ ತಾಹೀರ್, ಎನ್. ಜಗದೀಶನ್, ಕರ್ಣ ಶರ್ಮಾ, ಲುಂಗಿ ಗಿಡಿ, ಮಿಚೆಲ್ ಸ್ಯಾಂಟನರ್, ಮೋನು ಕುಮಾರ್, ಋತುರಾಜ್ ಗಾಯಕವಾಡ, ಸ್ಯಾಮ್ ಕರನ್, ಜೋಶ್ ಹ್ಯಾಜಲ್‌ವುಡ್, ರವಿಶ್ರೀನಿವಾಸನ್ ಸಾಯಿ ಕಿಶೋರ್.
ಪಂದ್ಯದ ಆರಂಭ: ಸಂಜೆ 7.30ರಿಂದ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್