ಅಂಚೆ ಚೀಟಿ ಸಂಗ್ರಹ ಹವ್ಯಾಸವಿರುವ ಮಕ್ಕಳಿಗೆ ಗುಡ್ ನ್ಯೂಸ್

ಉಡುಪಿ: ಭಾರತೀಯ ಅಂಚೆ ಇಲಾಖೆಯು ದೀನ್ ದಯಾಳ್ (ಸ್ಪರ್ಷ್)   ಯೋಜನೆಯ ಮೂಲಕ ಅಂಚೆ ಚೀಟಿ ಸಂಗ್ರಹಣಾ ಅಭಿರುಚಿ ಮತ್ತು ಅಂಚೆ ಚೀಟಿಯ ಸಂಶೋಧನಾ ಪ್ರವೃತ್ತಿಗೆ ಪ್ರೋತ್ಸಾಹಧನ, ಎಳೆ ವಯಸ್ಸಿನಲ್ಲೇ ದೀರ್ಘ ಕಾಲಿಕ ಪರಿಣಾಮ ಬೀರಬಹುದಾದ ಮತ್ತು  ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗುವ ರೀತಿಯಲ್ಲಿ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ 6 ನೇ ತರಗತಿಯಿಂದ 9 ನೇ ತರಗತಿಯವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ವಿದ್ಯಾರ್ಥಿಗಳು 2018-19 ರ ಶೈಕ್ಷಣಿಕ ಪರೀಕ್ಷೆಯಲ್ಲಿ ಶೇ. 60 ಮತ್ತು ಅದಕ್ಕಿಂತ ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾದ, ಅಂಚೆ ಚೀಟಿ ಸಂಗ್ರಹಣಾ ಖಾತೆ ಹೊಂದಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 6000 ರೂ. ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಈ ಬಗ್ಗೆ ಪ್ರಪ್ರಥಮವಾಗಿ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮತ್ತು ಅಂಚೆ ಚೀಟಿ ಸಂಗ್ರಹಣೆಗೆ ಸಂಬಂಧಿಸಿದಂತೆ ಲಿಖಿತ ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ಬರೆಯಬೇಕು. ನಂತರ ಕರ್ನಾಟಕ ರಾಜ್ಯಮಟ್ಟದಲ್ಲಿ ನೀಡಲ್ಪಡುವ ಅಂಚೆ ಚೀಟಿ ಸಂಗ್ರಹಣೆಯ ಯೋಜನಾ ಸ್ಪರ್ಧೆಯಲ್ಲಿ ಜಯಶೀಲರಾದ 40 ವಿದ್ಯಾರ್ಥಿಗಳು ಈ ವೇತನಕ್ಕೆ ಅರ್ಹರಾಗುವರು.

ಕರ್ನಾಟಕ ರಾಜ್ಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 5 ಕೊನೆಯ ದಿನ. ಸ್ಪರ್ಧಾಕಾಂಕ್ಷಿಗಳು ತಮ್ಮ ಅರ್ಜಿಯನ್ನು ಸೆಪ್ಟಂಬರ್ 5 ರ ಒಳಗೆ ಅಂಚೆ ಅಧೀಕ್ಷಕರು, ಉಡುಪಿ ವಿಭಾಗ, ಉಡುಪಿ ಇವರಿಗೆ ನೊಂದಾಯಿತ ಪತ್ರದ ಮೂಲಕ ಅಥವಾ ತ್ವರಿತ ಅಂಚೆಯ ಮೂಲಕ ರವಾನಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಸಮೀಪದ ಅಂಚೆ ಕಚೇರಿ ಅಥವಾ  ದೂರವಾಣಿ ಸಂಖ್ಯೆ: 0820-2520471, 2521780 ಸಂಪರ್ಕಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ