ಮಂಗಳೂರು: ಎಂಆರ್ ಪಿ ಎಲ್ ಉದ್ಯೋಗಗಳಲ್ಲಿ ಶೇಕಡಾ 80 ರಷ್ಟು ಪಾಲು ಸ್ಥಳೀಯ ನಿರುದ್ಯೋಗಿ ಯುವಜನರಿಗೆ ಸಿಗಲೇಬೇಕು. ಅದು ಕೈಗಾರಿಕೆಗಾಗಿ ನೆಲ, ಜಲ ನೀಡಿದ ತುಳುನಾಡಿನ ಹಕ್ಕು. ಕಂಪೆನಿ ಈ ನ್ಯಾಯಯುತ ಬೇಡಿಕೆಯನ್ನು ಕಡೆಗಣಿಸಿದರೆ ಉದ್ಯೋಗದ ಹಕ್ಕಿನ ಹೋರಾಟ ಗಂಭೀರ ಸ್ವರೂಪ ಪಡೆಯಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು. ಅವರು ಎಂ ಆರ್ ಪಿ ಎಲ್ ಪ್ರಧಾನ ದ್ವಾರದ ಮುಂಭಾಗ ಎಮ್ ಆರ್ ಪಿ ಎಲ್ ನೇಮಕಾತಿ ನಡೆಸುತ್ತಿರುವ 233 ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ಹಮ್ಮಿಕೊಂಡಿದ್ದ ಯುವಜನರ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಎಂಆರ್ ಪಿ ಎಲ್ ಸಹಿತ ಬೃಹತ್ ಉದ್ದಿಮೆಗಳಿಗೆ ಭೂಮಿ ನೀಡುವಾಗ ಉದ್ಯೋಗ ಸೃಷ್ಟಿ, ನಿರುದ್ಯೋಗ ನಿವಾರಣೆಯ ಭರವಸೆಯನ್ನು ಜನರಿಗೆ ನೀಡಲಾಗಿತ್ತು. ಆದರೆ ಇಂದು ಎಂಆರ್ ಪಿ ಎಲ್ ಮಾತ್ರವಲ್ಲದೆ, ಬಂದರು, ಕುದುರೆಮುಖ, ಎಮ್ ಸಿ ಎಫ್, ಎನ್ ಐ ಟಿ ಕೆ, ಯುಪಿಸಿಎಲ್ ನಂತಹ ಬೃಹತ್ ಉದ್ಯಮಗಳು ಉದ್ಯೋಗ ಸೃಷ್ಟಿಯಲ್ಲಿ ದಯನೀಯ ವೈಫಲ್ಯ ಕಂಡಿದೆ. ಇರುವ ಉದ್ಯೋಗಗಳೂ ಹೊರ ರಾಜ್ಯಗಳ ಪಾಲಾಗುತ್ತಿವೆ. ಇದರಿಂದ ಜಿಲ್ಲೆಯ ಹತಾಷ ಯುವಜನರು ನಿರುದ್ಯೋಗದಿಂದ ಕಂಗೆಟ್ಟು ದಾರಿ ತಪ್ಪುತ್ತಿದ್ದಾರೆ. ಜನಪ್ರತಿನಿಧಿಗಳು, ಕಂಪೆನಿ ಆಡಳಿತಗಳ ತಾತ್ಸಾರ ಮನೋಭಾವವೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದರು.
ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ಮಾತನಾಡಿ, ಕರಾವಳಿ ಜಿಲ್ಲೆಗಳ ಯುವ ಜನತೆ, ರಾಜಕೀಯ ಪಕ್ಷಗಳ ಬದ್ದತೆಯ ಕೊರತೆ ಕಂಪೆನಿಗಳ ಉದ್ಯೋಗ ಪರರಾಜ್ಯಗಳ ಪಾಲಾಗುತ್ತಿವೆ. ಕಂಪೆನಿಗಳು ಸೃಷ್ಟಿಸಿರುವ ಮಾಲಿನ್ಯದಿಂದ ಜನತೆ ಕಂಗೆಟ್ಟಿದ್ದಾರೆ ಕನಿಷ್ಟ ಉದ್ಯೋಗಗಳಲ್ಲಿ ನ್ಯಾಯಯುತ ಪಾಲಾದರೂ ನಮಗೆ ಸಿಗಬೇಕಿದೆ. ಆ ನಿಟ್ಟಿನಲ್ಲಿ ಯುವಜನತೆ ಎಚ್ಚೆತ್ತು ಕೊಂಡು ಹೋರಾಟಕ್ಕಿಳಿಯಬೇಕಿದೆ ಎಂದರು.
ಡಿವೈಎಫ್ಐ ಮುಖಂಡರಾದ ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಅಶ್ರಫ್ ಕೆ ಸಿ ರೋಡ್ ಧರಣಿಯನ್ನುದ್ದೇಶಿಸಿ ಮಾತನಾಡಿದರು. ಎಂ ಆರ್ ಪಿಎಲ್ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಡಿವೈಎಫ್ಐ ಪದಾಧಿಕಾರಿಗಳಾದ ಅಜ್ಮಲ್ ಅಹ್ಮದ್, ತುಳುಸಿದಾಸ್ ವಿಟ್ಲ, ಸುರೇಂದ್ರ ಬಂಟ್ವಾಳ, ಆಶಾ ಬೋಳೂರು, ಸಲೀಂ ಶ್ಯಾಡೋ, ಸಿಲ್ವಿಯಾ, ಪ್ರಮೀಳಾ, ಸೌಮ್ಯ, ಪ್ರಶಾಂತ್ ಉರ್ವಸ್ಟೋರ್, ಚರಣ್ ಶೆಟ್ಟಿ ಪಂಜಿಮೊಗರು, ಮುಸ್ತಫ ಬೈಕಂಪಾಡಿ, ಅನಿಲ್ ಪಂಜಿಮೊಗರು, ನೌಷಾದ್ ಬಾವು, ಆಶ್ರಫ್ ಸಫಾ, ಸೈಫುಲ್ಲಾ ಕಾಟಿಪಳ್ಳ ನಾಸಿರ್ ಕೃಷ್ಣಾಪುರ ಸಿಪಿಎಂ ಮುಖಂಡರಾದ ಸುರೇಶ್ ಬಜಾಲ್, ಬಶೀರ್ ಪಂಜಿಮೊಗರು ಮುಂತಾದವರು ಉಪಸ್ಥಿತರಿದ್ದರು. ಮಂಗಳೂರು ನಗರ ಕಾರ್ಯದರ್ಶಿ ಸಾದಿಕ್ ಕಣ್ಣೂರು ಸ್ವಾಗತಿಸಿದರು, ನಗರಾಧ್ಯಕ್ಷ ನವೀನ್ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀನಾಥ್ ಕುಲಾಲ್ ವಂದಿಸಿದರು.