ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಸ್ಥಾನ ಪಡೆಯಲು ಯತ್ನ: ದಿನಕರ ಬಾಬು

ಉಡುಪಿ, ಮೇ 31:  ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕೆನ್ನುವ ಉಡುಪಿ ಜಿಲ್ಲೆಯ ಅತಿಯಾದ ಆತ್ಮವಿಶ್ವಾಸ ಮತ್ತು ತಂತ್ರಗಾರಿಕೆಯನ್ನು ಬೇರೆ ಜಿಲ್ಲೆಯವರು ಅನುಕರಣೆ ಮಾಡಿದ್ದರಿಂದ ಜಿಲ್ಲೆಗೆ ಹಿನ್ನೆಡೆಯಾಗಿದ್ದು,  ರಾಜ್ಯದಲ್ಲಿ 5 ನೇ ಸ್ಥಾನ ಪಡೆಯುವಂತಾಗಿದೆ,   ಮುಂದಿನ ಸಾಲಿನಲ್ಲಿ ಬೇರೆ ರೀತಿಯ ವಿಭಿನ್ನ ತಂತ್ರಗಾರಿಕೆ ಹಾಗೂ ಮಕ್ಕಳಲ್ಲಿ ಕಲಿಯುವಿಕೆಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸುವುದರ ಮೂಲಕ , ರಾಜ್ಯದಲ್ಲಿ ಮತ್ತೆ ಪ್ರಥಮ ಸ್ಥಾನ ಪಡೆಯುವಲ್ಲಿ ಎಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರುಗಳು ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಅವರು ಶುಕ್ರವಾರ,  ಉಡುಪಿ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಪ್ರಾರಂಭೋತ್ಸವ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಬಾಲಕಿಯರ ಪ್ರೌಢಶಾಲೆಯು ಈ ಹಿಂದಿನಿಂದಲೂ ಕೂಡಾ ನಗರದ ಪ್ರತಿಷ್ಟಿತ ಶಾಲೆಗಳಲ್ಲಿ ಒಂದಾಗಿದ್ದು, ಇಲ್ಲಿನ ವಿದ್ಯಾರ್ಥಿನಿಯರು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ನಡೆಯುವ ನಡುವೆ ಈ ಸರಕಾರಿ ಶಾಲೆ ಒಂದು ಉತ್ತಮ ಸಾಧನೆ ತೋರಿಸಿರುವುದಕ್ಕೆ ಇಲ್ಲಿನ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಕಾಳಜಿಯನ್ನು ದಿನಕರ ಬಾಬು ಅಭಿನಂದಿಸಿದರು.ನಗರಸಭೆಯ ಸದಸ್ಯೆ ರಶ್ಮಿತಾ ಸಿ.ಭಟ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಬಾಯರಿ ಮತ್ತಿತರರು ಉಪಸ್ಥಿತರಿದ್ದರು.