ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಆದೇಶದಂತೆ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದ್ದು. ವಿದ್ಯಾರ್ಥಿಗಳ ಪರೀಕ್ಷೆಗಳೂ ಮುಂದೂಡಲ್ಪಟ್ಟಿದ್ದು 7-9ನೇ ತರಗತಿಗೆ ಪರೀಕ್ಷೆಗಳು ನಡೆಯುವುದಿಲ್ಲ, ಎಸ್ಸೆಸ್ಸೆಲ್ಸಿ- ಪಿಯುಸಿ ಪರೀಕ್ಷೆ ಬಗ್ಗೆ ಏ. 14ರ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್ಬುಕ್ ಲೈವ್ ವಿಡಿಯೋ ಮೂಲಕ ಸ್ಪಷ್ಟಣೆ ನೀಡಿದ್ದಾರೆ. 7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಮುಂದಿನ ತರಗತಿಗೆ ಪಾಸ್ ಮಾಡಿ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಆದರೆ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳ ಹಂತದಲ್ಲಿ ಆಂತರಿಕ ಪರೀಕ್ಷೆ ರೂಪಣಾತ್ಮಕ, ಮತ್ತು ಸಂಕಲನಾತ್ಮಕ ಪರೀಕ್ಷೆ ನಡೆಸಲಾಗಿದೆ. ಅದರ ಆಧಾರದಲ್ಲಿ 9ನೇ ತರಗತಿ ವಿದ್ಯಾರ್ಥಿಗಳನ್ನ 10ನೇ ತರಗತಿಗೆ ಪಾಸ್ ಮಾಡಬೇಕು. ಒಂದು ವೇಳೆ ಶಾಲೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದೇ ಇದ್ದರೆ ರಜೆ ಅವಧಿಯಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟ ಉತ್ತಮಗೊಳಿಸಬೇಕು. ಜೂನ್ ಒಳಗೆ ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೊಂದು ಪರೀಕ್ಷೆ ಕೊಡಬೇಕು. ನಂತರ ಅವರನ್ನು ಪಾಸ್ ಮಾಡುವ ನಿರ್ಧಾರವನ್ನು ಶಾಲೆಗಳು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಏಪ್ರಿಲ್ 14ರ ನಂತರ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತೆ. ಇತ್ತ ದ್ವಿತೀಯ ಪಿಯುಸಿ ಒಂದು ವಿಷಯದ ಪರೀಕ್ಷೆ ಬಾಕಿ ಇದೆ. ಅದನ್ನೂ ರದ್ದು ಮಾಡಲ್ಲ, ಏಪ್ರಿಲ್ 14ರ ನಂತರ ಆ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.