ಉಡುಪಿ, ಮೇ 21: 2019-20 ರಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದೆ. ಪ್ರಥಮ ಪ್ರಯತ್ನದಲ್ಲಿ ಶೇ.60 -74.99 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 7000 ರೂ.ಗಳನ್ನು ಮತ್ತು ಶೇ.75 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ 15000 ರೂ. ಗಳನ್ನು ಮಂಜೂರು ಮಾಡಲಾಗುತ್ತಿದೆ.
ಈ ಪ್ರೋತ್ಸಾಹಧನವನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆ ಹಾಗೂ ಇತರೆ ವಿವರಗಳನ್ನು ಇಲಾಖೆಯ ವೆಬ್ಸೈಟ್ www.sw.kar.nic.in ನಲ್ಲಿ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಆನ್ಲೈನ್ ಮೂಲಕ ನೋಂದಾಯಿಸಲು ಡಿಸೆಂಬರ್ 31 ಕೊನೆಯ ದಿನ.
ವಿದ್ಯಾರ್ಥಿಯು ಕರ್ನಾಟಕ ರಾಜ್ಯದವರಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ಪ.ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತದೆ.
ಎಸ್ಎಸ್ಎಲ್ಸಿ ನೋಂದಣಿ ಸಂಖ್ಯೆ, ಆಧಾರ್ ಕಾರ್ಡ್ನಲ್ಲಿರುವಂತೆ ವಿದ್ಯಾರ್ಥಿಯ ಹೆಸರು ಮತ್ತು ಆಧಾರ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಫೋಟೋ, ಸ್ಕ್ಯಾನ್ ಮಾಡಲಾದ ಎಸ್ಎಸ್ಎಲ್ಸಿ ಪ್ರಮಾಣ ಪತ್ರ, ಆಧಾರ್ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ವಿವರದೊಂದಿಗೆ ಆನ್ಲೈನ್ನಲ್ಲಿ ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗೆ ಹಾಗೂ ವಿವರಗಳಿಗೆ ದೂರವಾಣಿ ಸಂಖ್ಯೆ: 0820-2574892 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.