ಎಸ್.ಎಸ್.ಎಲ್.ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ 14,214 ವಿದ್ಯಾರ್ಥಿಗಳು

ಉಡುಪಿ : ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 14,214 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಮಾ. 21 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆ ನಡೆಯಲಿದ್ದು, ಈ ಸಂಬಂಧ ಪೂರ್ವ ಸಿದ್ಧತಾ ಸಭೆ ಸೋಮವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶೇಷಶಯನ, ಒಟ್ಟು  ಜಿಲ್ಲೆಯಲ್ಲಿ 51 ಪರೀಕ್ಷಾ ಕೇಂದ್ರಗಳಿದ್ದು, ಬೈಂದೂರು ವಲಯದ 8 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2092 ವಿದ್ಯಾರ್ಥಿಗಳು, ಕುಂದಾಪುರ ವಲಯದ 8 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2528 ವಿದ್ಯಾರ್ಥಿಗಳು, ಬ್ರಹ್ಮಾವರ ವಲಯದ 11 ಪರೀಕ್ಷಾ ಕೇಂದ್ರಗಳಲ್ಲಿ 2927 ವಿದ್ಯಾರ್ಥಿಗಳು, ಉಡುಪಿ ವಲಯದ 15 ಪರೀಕ್ಷಾ ಕೇಂದ್ರಗಳಲ್ಲಿ 3749 ವಿದ್ಯಾರ್ಥಿಗಳು, ಕಾರ್ಕಳ ವಲಯದ 9 ಪರೀಕ್ಷಾ ಕೇಂದ್ರಗಳಲ್ಲಿ 2918 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

 ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳ 438 ಪರೀಕ್ಷಾ ಕೇಂದ್ರದ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಎಸ್. ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಇಡಲು ಭದ್ರತಾ ಕೊಠಡಿಯ ವ್ಯವಸ್ಥೆಯನ್ನು ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ಮಾಡಲಾಗಿದೆ ಎಂದರು.

ಪ್ರತೀ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಸ್ವೀಕರಿಸಲು ಮುಖ್ಯ ಅಧೀಕ್ಷಕರು ಮತ್ತು ಕಸ್ಟೋಡಿಯನ್ ನೇಮಕ ಮಾಡಲಾಗಿದ್ದು, ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಒಟ್ಟು 3 ತಂಡ,  ಜಿಲ್ಲಾ ಜಾಗೃತ ದಳ ಅಧಿಕಾರಿಗಳ 2 ತಂಡ,  ಉಪನಿರ್ದೇಶಕ (ಅಭಿವೃದ್ಧಿ), ಉಪಯೋಜನಾ ಸಮನ್ವಯಾಧಿಕಾರಿಗಳನ್ನು ಒಳಗೊಂಡ ತಂಡ ನೇಮಕ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹೊರತು ಪಡಿಸಿ ಇತರ ಇಲಾಖೆಗಳಿಂದ ಪ್ರತಿ ಕೇಂದ್ರಕ್ಕೆ ವೀಕ್ಷಕರ ನೇಮಕ ಮಾಡಲಾಗಿದೆ ಎಂದರು.

ಕುಂದಾಪುರ ವಲಯದಿಂದ 2 ಮಾರ್ಗಾಧಿಕಾರಿ, ಬೈಂದೂರು, ಬ್ರಹ್ಮಾವರ, ಕಾರ್ಕಳ,  ಉಡುಪಿ ವಲಯದಿಂದ 3 ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪ್ರತೀ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳ ಸಂಖ್ಯೆಗನುಣವಾಗಿ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳುವುದು. ಕೊಠಡಿ ಮೇಲ್ವಿಚಾರಕರ ಪಟ್ಟಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಅನುಮೋದನೆ ಮಾಡುವರು. ಪರೀಕ್ಷಾ ಕೆಂದ್ರದ ಸುತ್ತ ಮುತ್ತ 144 ಸೆಕ್ಷನ್ ಜಾರಿಗೆ ಬರಲಿದ್ದು, ಇದು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.  ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.