ಎಸ್.‌ಎಸ್.‌ಎಲ್.‌ಸಿ ಪರೀಕ್ಷೆ ಮೌಲ್ಯಮಾಪನ, ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ ಜುಲೈ 7: ಜುಲೈ 2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯ ಮಾಪನ ಕಾರ್ಯವು, ಜುಲೈ 9 ರಿಂದ ಪ್ರಾರಂಭವಾಗಿ ಸುಮಾರು 10 ದಿನಗಳವರೆಗೆ ನಡೆಯಲಿದೆ.

ಮೌಲ್ಯ ಮಾಪನ ಮುಗಿದು ಪ್ರಶ್ನೋತ್ತರ ಪತ್ರಿಕೆಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಲ್ಲೇಶ್ವರಂ ಬೆಂಗಳೂರು ಇಲ್ಲಿಗೆ ಸಾಗಿಸುವವರೆಗೆ, ಜಿಲ್ಲೆಯ ಸಂಬಂಧಿಸಿದ ಮೌಲ್ಯ ಮಾಪನ ಕೇಂದ್ರಗಳಾದ, ಯು.ಕಮಲಾಬಾಯಿ ಪ್ರೌಢಶಾಲೆ, ಕಡಿಯಾಳಿ, ಉಡುಪಿ, ಆದಿ ಉಡುಪಿ ಪ್ರೌಢಶಾಲೆ- ಆದಿ ಉಡುಪಿ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು- ಉಡುಪಿ, ಸರ್ಕಾರಿ ಪ್ರೌಢಶಾಲೆ ವಳಕಾಡು- ಉಡುಪಿ, ಕ್ರಿಶ್ಚಿಯನ್ ಪ್ರೌಢಶಾಲೆ ಉಡುಪಿ, ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ- ಕುಂಜಿಬೆಟ್ಟು, ಈ ಮೌಲ್ಯಮಾಪನ ಕೇಂದ್ರಗಳಲ್ಲಿ ಜುಲೈ 8 ರಿಂದ  ಮೌಲ್ಯ ಮಾಪನ ಕಾರ್ಯವು ಮುಕ್ತಾಯವಾಗುವವರೆಗೆ ಸಂಬಂಧಿಸಿದ ಮೌಲ್ಯಮಾಪನ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ, ಮೌಲ್ಯ ಮಾಪನ ಕಾರ್ಯವು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಮತ್ತು ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟಲು ನಿಗದಿಪಡಿಸಿದ ಎಲ್ಲಾ ಮೌಲ್ಯಮಾಪನ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಸೆಕ್ಷನ್ 144(1) ರಂತೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.

ಈ ನಿಷೇಧಾಜ್ಞೆ ಆದೇಶವು ನಿಗದಿಪಡಿಸಿದ ಪರೀಕ್ಷಾ ಪ್ರಶ್ನೋತ್ತರ ಮೌಲ್ಯ ಮಾಪನ ಕೇಂದ್ರಗಳ ಸುತ್ತಲೂ ದಿನದ 24 ಗಂಟೆಗಳಲ್ಲಿಯೂ ಜುಲೈ 8 ರಿಂದ ಪ್ರಾರಂಭಿಸಿ ಮೌಲ್ಯ ಮಾಪನ ಕಾರ್ಯವು ಮುಕ್ತಾಯವಾಗುವ ತನಕ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.