ಆರ್‌ಎಸ್‌ಎಸ್‌ ಕುರಿತ ಚಲನಚಿತ್ರಕ್ಕೆ ರಾಜಮೌಳಿ ತಂದೆ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಸಾರಥ್ಯ

ಖ್ಯಾತ ನಿರ್ದೇಶಕ ಎಸ್. ರಾಜಮೌಳಿ ಅವರ ತಂದೆ, ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಅತ್ಯಂತ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರು. ಬಾಹುಬಲಿ, ಆರ್‌ಆರ್‌ಆರ್, ಮಣಿಕರ್ಣಿಕಾ, ಬಜರಂಗಿ ಭಾಯಿಜಾನ್, ಮಗಧೀರ ಮತ್ತು ಮೆರ್ಸಲ್ ಸೇರಿದಂತೆ ಅನೇಕ ಚಿತ್ರಗಳನ್ನು ಬರೆದು ಪ್ರಸಿದ್ದಿ ಪಡೆದಿರುವ ಪ್ರಸಾದ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಳೆದ ತಿಂಗಳು, ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಸಾದ್ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಕೂಡಾ ಮಾಡಿದ್ದರು.

ವಿಜಯವಾಡದಲ್ಲಿ ಆರ್‌ಆರ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ರಾಮ್ ಮಾಧವ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಸಾದ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ನ ಹಿಂದಿನ ನಕಾರಾತ್ಮಕ ಅಭಿಪ್ರಾಯವು ಅದರ ಮೇಲೆ ಚಲನಚಿತ್ರ ಕಥೆಯನ್ನು ಬರೆಯಲು ಕೇಳಿದಾಗ ತೀವ್ರವಾಗಿ ಬದಲಾಯಿತು ಎಂದು ಅವರು ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಪ್ರಸಾದ್, “ನಿಮ್ಮೆಲ್ಲರ ಮುಂದೆ ನಾನು ಒಂದು ವಿಷಯ ಒಪ್ಪಿಕೊಳ್ಳಲು ಬಯಸುತ್ತೇನೆ. ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ನನಗೆ ಆರ್‌ಎಸ್‌ಎಸ್ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಇತರ ಅನೇಕರಂತೆ ನಾನೂ ಕೂಡಾ ಗಾಂಧಿಯನ್ನು ಅವರು ಕೊಂದದ್ದು ಎಂದು ನಂಬಿದ್ದೆ. ಆದರೆ ನಾಲ್ಕು ವರ್ಷಗಳ ಹಿಂದೆ, ಅವರು ಆರ್‌ಎಸ್‌ಎಸ್‌ ಬಗ್ಗೆ ಚಲನಚಿತ್ರ ಬರೆಯಲು ನನ್ನನ್ನು ಕೇಳಿದರು. ಅದಕ್ಕೆ ಸಂಭಾವನೆ ಸಿಗುತ್ತಿದೆ ಎನ್ನುವ ಕಾರಣಕ್ಕೆ ನಾಗ್ಪುರಕ್ಕೆ ಹೋಗಿ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದೆ.ವನಾನು ಅಲ್ಲಿ ಒಂದು ದಿನ ಇದ್ದು ಮೊದಲ ಬಾರಿಗೆ ಆರ್‌ಎಸ್‌ಎಸ್ ಎಂದರೇನು ಎಂದು ಅರ್ಥಮಾಡಿಕೊಂಡೆ. ಇಷ್ಟು ದಿನ ಅಂತಹ ದೊಡ್ಡ ಸಂಸ್ಥೆಯ ಬಗ್ಗೆ ನನಗೆ ತಿಳಿದಿರಲಿಲ್ಲವೆಂದು ನಾನು ಬಹಳ ಪಶ್ಚಾತ್ತಾಪ ಪಟ್ಟಿದ್ದೇನೆ. ಆರ್‌ಎಸ್‌ಎಸ್ ಇಲ್ಲದಿದ್ದರೆ, ಕಾಶ್ಮೀರವೇ ಇರುತ್ತಿರಲಿಲ್ಲ, ಅದು ಪಾಕಿಸ್ತಾನದೊಂದಿಗೆ ವಿಲೀನವಾಗುತ್ತಿತ್ತು. ಪಾಕಿಸ್ತಾನದಿಂದಾಗಿ ಲಕ್ಷಾಂತರ ಹಿಂದೂಗಳು ಸಾಯುತ್ತಿದ್ದರು.” ಎಂದು ಪ್ರಸಾದ್ ಹೇಳಿದ್ದಾರೆ.

ಪ್ರಸಾದ್ ಅವರು ಎರಡು ತಿಂಗಳೊಳಗೆ ಕಥೆಯನ್ನು ಬರೆದಿದ್ದಾರೆ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಮೂಲ: ಟೈಮ್ಸ್ ನೌ