ಆರ್‌ಆರ್‌ಆರ್-2 ಗೆ ಪೃಷ್ಠಭೂಮಿ ತಯಾರು: ಚಿತ್ರಕಥೆ ಬರೆಯುವುದಲ್ಲಿ ನಿರತರಾಗಿರುವ ವಿಜಯೇಂದ್ರ ಪ್ರಸಾದ್

ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಚಿತ್ರವು ದೇಶ ಮತ್ತು ವಿದೇಶದ ಪ್ರೇಕ್ಷಕರನ್ನು ಚಿತ್ರಮಂದಿರದೆಡೆಗೆ ಆಕರ್ಷಿಸಿತ್ತು ಜೊತೆಗೆ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಕೂಡಾ ಮಾಡಿತ್ತು. ಇದೀಗ ಆರ್‌ಆರ್‌ಆರ್ ಭಾಗ 2 ತೆರೆಗೆ ಬರಲಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಇಂಡಿಯಾ ಟುಡೇ ಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿಯವರು ಆರ್‌ಆರ್‌ಆರ್ 2 ಅಭಿವೃದ್ಧಿಯಲ್ಲಿದೆ ಎಂದು ದೃಢಪಡಿಸಿದ್ದಾರೆ ಮತ್ತು ರಾಜಮೌಳಿ ತಂದೆ ಈಗಾಗಲೇ ಉತ್ತರಭಾಗದ ಕಥೆ ಬರೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ನನ್ನ ಎಲ್ಲಾ ಚಿತ್ರಗಳಿಗೆ ನನ್ನ ತಂದೆ ಕಥೆ ಬರೆಯುತ್ತಾರೆ. ನಾವು ಆರ್‌ಆರ್‌ಆರ್ 2 ಬಗ್ಗೆ ಸ್ವಲ್ಪ ಚರ್ಚಿಸಿದ್ದೇವೆ ಮತ್ತು ಅವರು ಕಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ”ಎಂದು ರಾಜಮೌಳಿ ಹೇಳಿದ್ದಾರೆ.

ಎಸ್‌ಎಸ್ ರಾಜಮೌಳಿ ಅವರು ಆರ್‌ಆರ್‌ಆರ್ 2 ಕುರಿತು ಮಾತನಾಡಿದ್ದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿಯೂ ಸಹ, ಚಲನಚಿತ್ರ ನಿರ್ಮಾಪಕರನ್ನು ಮುಂದಿನ ಭಾಗದ ಕುರಿತು ಕೇಳಿದಾಗ, “ಇದು ತಣ್ಣಗಾಗಲಿ. ಸಹಜವಾಗಿ, ಇದು ನನಗೆ ಬಹಳ ಸಂತೋಷವನ್ನು ನೀಡುತ್ತದೆ, ಅದು ಗಲ್ಲಾಪೆಟ್ಟಿಗೆಯಲ್ಲಿ ಏನು ಮಾಡುತ್ತದೆ ಎಂಬುದಕ್ಕಾಗಿ ಅಲ್ಲ, ಆದರೆ ನನ್ನ ಸಹೋದರರೊಂದಿಗೆ ಕಳೆಯಲು ನನಗೆ ಹೆಚ್ಚು ಸಮಯ ನೀಡುತ್ತದೆ ಎನ್ನುವ ಕಾರಣಕ್ಕಾಗಿ. ಅದು ನನಗೆ ಹೆಚ್ಚು ರೋಮಾಂಚನಕಾರಿಯಾಗಿದೆ. ಆದರೆ ನಮ್ಮೊಳಗಿರುವುದನ್ನು ಕಾಲವೆ ಬಿಚ್ಚಿಡಲಿ ” ಎಂದಿದ್ದರು.

ಆರ್‌ಆರ್‌ಆರ್ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತೀಯ ಕ್ರಾಂತಿಕಾರಿಗಳ ಸುತ್ತ ಹೆಣೆದ ಕಾಲ್ಪನಿಕ ಕಥೆಯಾಗಿದ್ದು, ಅಲ್ಲೂರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ಮತ್ತು ಕೊಮರಂ ಭೀಮ್ ಪಾತ್ರವನ್ನು ಜೂನಿಯರ್ ಎನ್ಟಿಆರ್ ನಿಭಾಯಿಸಿದ್ದಾರೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ ಸುಮಾರು 1200 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆರ್‌ಆರ್‌ಆರ್ 2 ಚಿತ್ರ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.