ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿದ ರಾಜಮೌಳಿ: ಆತ್ಮ ತೃಪ್ತಿಯ ಅನುಭೂತಿ ಎಂದ ಸ್ಟಾರ್ ಡೈರೆಕ್ಟರ್

ಚೆನ್ನೈ: ಚಿತ್ರ ನಿರ್ದೇಶನದ ಗೌಜಿ ಗದ್ದಲ ಮತ್ತು ಆಸ್ಕರ್ ಪ್ರಶಸ್ತಿಯ ವ್ಯಸ್ತ ವೇಳಾಪಟ್ಟಿಯ ನಂತರ ಬಿಡುವು ಪಡೆದುಕೊಂಡ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಬಹುದಿನದ ಆಸೆಯನ್ನು ಪೂರೈಸಿಕೊಂಡಿದ್ದಾರೆ.

ಮಧ್ಯ ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುವುದು ಅವರ ಬಹು ದಿನಗಳ ಆಸೆಯಾಗಿದ್ದು, ಇದೀಗ ತಮ್ಮ ಕುಟುಂಬದೊಂದಿಗೆ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ರಾಜಮೌಳಿ ಅವರು ಕಳೆದ ತಿಂಗಳು ಪೂರ್ಣಗೊಳಿಸಿದ ಪ್ರವಾಸದ ಚಿತ್ರಗಳ ವೀಡಿಯೊ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದು, “ತುಂಬಾ ಸಮಯದಿಂದ ಮಧ್ಯ ತಮಿಳುನಾಡಿನಲ್ಲಿ ರಸ್ತೆ ಪ್ರವಾಸ ಮಾಡಲು ಬಯಸಿದ್ದೆ. ದೇವಸ್ಥಾನಗಳಿಗೆ ಭೇಟಿ ನೀಡಲು ಬಯಸಿದ ನನ್ನ ಮಗಳಿಗೆ ಧನ್ಯವಾದಗಳು, ನಾವು ಅದನ್ನು ಪ್ರಾರಂಭಿಸಿದೆವು. ಜೂನ್ ಕೊನೆಯ ವಾರದಲ್ಲಿ ಶ್ರೀರಂಗಂ, ದಾರಾಸುರಂ, ಬೃಹದೀಶ್ವರರ್ ಕೋಯಿಲ್, ರಾಮೇಶ್ವರಂ, ಕನಾಡುಕಥನ್, ತೂತುಕುಡಿ ಮತ್ತು ಮಧುರೈಗೆ ಹೋಗಿದ್ದೆ. ಮೀಸಲಿಟ್ಟಿದ್ದ ಕೆಲವೇ ದಿನಗಳಲ್ಲಿ ಮಂಜುಗಡ್ಡೆಯ ತುದಿಯನ್ನು ಮಾತ್ರ ನೋಡಲು ಸಾಧ್ಯವಾಯಿತು. ಅಂದವಾದ ವಾಸ್ತುಶಿಲ್ಪ, ಅದ್ಭುತವಾದ ಇಂಜಿನಿಯರಿಂಗ್ ಮತ್ತು ಪಾಂಡ್ಯ- ಚೋಳರು ನಾಯಕರು ಮತ್ತು ಇತರ ಅನೇಕ ಆಡಳಿತಗಾರರ ಆಳವಾದ ಆಧ್ಯಾತ್ಮಿಕ ಚಿಂತನೆಯು ನಿಜವಾಗಿಯೂ ಸಮ್ಮೋಹನಗೊಳಿಸುವಂತಿತ್ತು,” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಪ್ರವಾಸದುದ್ದಕ್ಕೂ ಅದ್ಭುತ ಆಹಾರ ಖಾದ್ಯಗಳನ್ನು ಸವಿದ ಅವರು ಮೂರು ಕಿಲೋ ತೂಕ ಹೆಚ್ಚಿಸಿಕೊಂಡಿರುವುದಾಗಿ ಅನುಮಾನಿಸಿದ್ದಾರೆ.

ಮಧ್ಯ ತಮಿಳುನಾಡಿನ ಶ್ರೀಮಂತ ಪರಂಪರೆ ಮತ್ತು ದೈವಿಕ ಶಾಂತಿಯನ್ನು ಅನ್ವೇಷಿಸಿರುವುದು ಆತ್ಮವನ್ನು ಕಲಕಿದೆ ಎಂದು ಅವರು ವೀಡಿಯೋ ಸಂದೇಶ ನೀಡಿದ್ದಾರೆ.