ಬಾಳೆಹಣ್ಣು ಪ್ರಿಯ ಪೆರ್ಡೂರು ಅನಂತಪದ್ಮನಾಭ ದೇಗುಲದಲ್ಲಿ ಮಾ.17ಕ್ಕೆ ಶ್ರೀಮನ್ಮಹಾರಥೋತ್ಸವ: “ಮದುಮಕ್ಕಳ ಜಾತ್ರೆ’ಗಿದೆ ವಿಶೇಷ ಮನ್ನಣೆ

ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭ ಮೂರ್ತಿ ಕಪ್ಪುಕಲ್ಲಿನಲ್ಲಿ ಕೆತ್ತಲಾಗಿದೆ. ಸುಮಾರು ಮೂರು ಅಡಿ ಎತ್ತರದ ಈ ಮೂರ್ತಿ ನಿಂತ ಭಂಗಿಯಲ್ಲಿದ್ದು ಶಂಖ ಚಕ್ರ ಗದಾ ಪದ್ಮ ಭರಿಯಾದ ವಿಗ್ರಹವಾಗಿದೆ. ಹೊಕ್ಕುಳಿನ ಭಾಗದಲ್ಲಿ ಪದ್ಮದ ಚಿಹ್ನೆಗಳಿವೆ. ವಿಗ್ರಹದ ಮೆಲ್ಭಾಗದ ಸುತ್ತ ನಾಗ ದೇವರ ಹೆಡೆ ಚಿತ್ರಿಸಲಾಗಿದೆ.

ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲವಾಸ ತಿಮ್ಮಪ್ಪನ ಹರಕೆ, ತಪ್ಪು ಮಾಡಿದವರು ಧರ್ಮಸ್ಥಳ ಮಂಜುನಾಥನಿಗೆ ಹಾಕುತ್ತಿದ್ದ ತಪ್ಪು ಕಾಣಿಕೆಗಳು ಕೂಡ ಇಲ್ಲಿ ಹಾಕುತ್ತಿದ್ದರು ಎಂಬ ನಂಬಿಕೆಯು ಇದೆ.ರೋಗ ರುಜಿನಗಳಿಗೆ ಸಂತಾನ ಭಾಗ್ಯಕ್ಕೆ, ಆರೋಗ್ಯ, ಸಿರಿ ಸಂಪತ್ತಿಗೆ ವೀಳ್ಯದೆಲೆ ಸೇವೆ, ದೋಷ ಪರಿಹಾರಕ್ಕೆ ಎಳ್ಳೆಣ್ಣೆ ಸೇವೆ ಪ್ರಮುಖ ವಿಶೇಷತೆಯಲ್ಲೊಂದಾಗಿದೆ. 

ದೇವರ ಮೂಲ ಬಿಂಬದ ಎಢಬಾಗದಲ್ಲಿ ಎರಡು ಮೂರ್ತಿಗಳಿದ್ದು ಎರಡು ಬಲಿ ಮೂರ್ತಿಗಳು ಒಂದೆ ರೀತಿಯಲ್ಲಿ ಕಾಣಸಿಗುವುದು.

ಕಮಲದ ಮೇಲೆ ನಿಂತ ಅನಂತ ಪದ್ಮನಾಭ ನಾಭಿಯಲ್ಲಿ ಪದ್ಮ, ಕೈಯಲ್ಲಿ, ಶೇಷಛತ್ರವಿದೆ. 

ಎದುರುಗಡೆಯ ತೀರ್ಥಮಂಟಪದಲ್ಲಿ ಗಣಪತಿ ಮೂರ್ತಿಯಿದ್ದು, ದೇವಾಲಯದ ಖಡ್ಗರಾವಣನ ಮತ್ತು ಬೊಬ್ಬರ್ಯನ ಹಿಂಬದಿಯಲ್ಲಿ ಪಂಜುರ್ಲಿ ಮತ್ತು ನಂದಿಗೋಣ ನಾಗಬ್ರಹ್ಮ ರಕ್ತೇಶ್ವರಿ, ಹತ್ತಿರದಲ್ಲಿ ಪಂಜುರ್ಲಿ ಗರಡಿಯೂ ಸಾನಿದ್ಯವಿದೆ.

ಇಲ್ಲಿ ನಡೆಯುತ್ತೆ ಏಳು ಬಗೆಯ ಉತ್ಸವ:

ಈ ದೇವಾಲಯಕ್ಕೂ ಸೂರಾಲಿನ ಅರಸರಿಗೂ ಅವಿನಾಭಾವ ಸಂಬಂಧವಿದೆ ಎಂಬ ಪ್ರತೀತಿ ಇದೆ.

ಇಲ್ಲಿ ತಾಳ ವಾದ್ಯವನ್ನು ಪೂಜಿಸುವ ಪ್ರತೀತಿ ಮೊದಲಿನಿಂದಲು ನಡೆದು ಬಂದಿದ್ದು ಭೂಮಿ ಪೂಜೆ ಮಾಡಿ ಮೃತಿಕಾ ನಯನ ಅಂಕುರಾರೋಪಣ ಜರಗುತ್ತದೆ. ಪೂಜಿಸಿ ಬಿತ್ತಿದ ಬೀಜ ಉತ್ಸವದ ದಿನ ಪುಷ್ಪಿತವಾಗುತ್ತದೆ. ಬಳಿಕ ಪ್ರಧಾನ ಕಾರ್ಯ ಧ್ವಜಾರೋಹಣ ತದನಂತರ ರಂಗಪೂಜೆ, ನಾಲ್ಕನೇ ದಿನ ವಿಜೃಂಭ್ರಣೆಯ ಶ್ರೀಮನ್ಮಹಾರಥೋತ್ಸವ. ಅದೇ ದಿನ ಉತ್ಸವ ಮುಗಿದು ರಾತ್ರಿ ದೇವರನ್ನು ಪತ್ನಿ ಸಮೇತನಾಗಿ ಮಲಗಿಸುವುದೇ ಶಯನೋಲಗ, ಮರುದಿನ ವಿಜೃಂಭ್ರಣೆಯಿಂದ ಸರ್ವವಾದ್ಯಗಳಿಂದ ದೇವರನ್ನು ಎಬ್ಬಿಸುವುದು ಕವಾಟೋದ್ಘಾಟನೆ, ಅಂದು ರಾತ್ರಿ ಅಮೃತಸ್ನಾನೋತ್ಸವ, ಧ್ವಜ ಅವರೋಹಣ, ಸೇರಿದಂತೆ ಏಳು ಬಗೆಯ ಉತ್ಸವಗಳಿವೆ.

ಪೆರ್ಡೂರು ಸಾಮರಸ್ಯದ ಕ್ಷೇತ್ರ:

ವೈರತ್ವ ಮರೆತು ಪೆರ್ಡೂರು ಇತಿಹಾಸ ವೈರತ್ವ ವಿಲ್ಲದೆ ಸಾಮರಸ್ಯದಿಂದ ಹುಲಿ- ಹಸು ಜೊತೆಗಿದ್ದ ಸ್ಥಳವಾಗಿತ್ತು ಎಂದು ಕೆಲವು ಕಥೆಗಳಲ್ಲಿ ಉಲ್ಲೆಖಿಸುತ್ತಾರೆ. ದನ ಮೇಯಿಸುವ ಸಂದರ್ಭದಲ್ಲಿ ಕಪಿಲೆ ದನಕಾಣದೆ ಯುವಕನೋರ್ವ ಹುಡುಕಿಕೊಂಡು ಬಂದ ಸಂದರ್ಭದಲ್ಲಿ ಹುತ್ತಕ್ಕೆ ಹಾಲನ್ನು ಎರೆಯುತಿದ್ದ ಕಪಿಲೆಯನ್ನು ನೋಡಿ ಪೇರ್ ಉಂಡು ಎಂದು ಉದ್ಘರಿಸಿದನಂತೆ ನಂತರ ಪೆರ್ಡೂರು ಎಂದು ಬದಲಾಯಿತು

ಮದುಮಕ್ಕಳ ಜಾತ್ರೆ ವಿಶೇಷ:

ನಿತ್ಯ ಒಂಬತ್ತು ಪೂಜೆಗಳು ನೆರವೇರುತಿದ್ದು, ಎಬ್ಬಿಸುವ ನಿರ್ಮಾಲ್ಯ ವಿಸರ್ಜನೆ, ಮಲಾಪಕರ್ಷಣ ಸ್ನಾನದ ಬಳಿಕ ಉಷಃಕಾಲ, ಕಲಶ, ಅಲಂಕಾರ, ಮಹಾಪೂಜಾ, ರಾತ್ರಿಪೂಜಾ, ಪೀಠಪೂಜಾ ಇವು ಪ್ರಧಾನ ಪೂಜೆಗಳು. ಸಹಸ್ರನಾಮ ಪೂಜಾ, ದೀಪ ಹಚ್ಚಿದೊಡನೆ ನಡೆಯುವ ದೀಪಪೂಜಾ ವಿಧಿ ವಿಧಾನಗಳೊಂದಿಗೆ ಇಲ್ಲಿ ನಡೆಯುತ್ತದೆ. ಇಲ್ಲಿ `ಮದುಮಕ್ಕಳ ಜಾತ್ರೆ’ ವಿಶೇಷ ವಾಗಿದೆ ಸಂಕ್ರಮಣ, ಸಿಂಹ ಸಂಕ್ರಮಣ ಉತ್ಸವವು `ಮದುಮಕ್ಕಳ ಜಾತ್ರೆ’ ನಡೆಯುತ್ತಿದೆ. ಹೊಸತಾಗಿ ಮದುವೆಯಾದ ಮದುಮಗಳು ತವರಲ್ಲಿ ಆಷಾಢ ಮುಗಿಸಿ ಸೋಣ ಸಂಕ್ರಮಣದಂದು ಪತಿಯೊಂದಿಗೆ ಇಲ್ಲಿಯ ದೇವರ ದರ್ಶನಗೈದು ಗಂಡನಮನೆಗೆ ತೆರಳುವುದು ಮುಖ್ಯ.

ಬಾಳೆಹಣ್ಣಿನ ಸೇವೆ ಬಲು ಪ್ರಿಯ. ಗೊನೆಬಾಳೆ ಹಣ್ಣು, ಬುಟ್ಟಿಹಣ್ಣು, ಸಿಬ್ಲ ಹಣ್ಣು, 365 ಹಣ್ಣು, ಸಾವಿರ ಹಣ್ಣುಗಳ ಸೇವೆ ನೀಡಲಾಗುತ್ತದೆ.

ಚಿತ್ರ: ಪ್ರಸನ್ನ ಪೆರ್ಡೂರು