ಉಡುಪಿ: ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶೀರೂರು ಮಠದ 31ನೇ ಯತಿಯಾಗಿ ಜ.18ರ ಮುಂಜಾನೆ ಸರ್ವಜ್ಞ ಪೀಠವೇರಿ ಶ್ರೀಕೃಷ್ಣಮಠದ ಕೃಷ್ಣಪೂಜಾ ಕೈಂಕರ್ಯವನ್ನು ಮುಂದಿನ ಎರಡು ವರ್ಷ ನೆರವೇರಿಸಲಿದ್ದಾರೆ. ಉಡುಪಿ ಪ್ರಯಾಯೋತ್ಸವವು ಲಕ್ಷಾಂತರ ಭಕ್ತಸಾಗರದ ಸಂಭ್ರಮೋತ್ಸವಕ್ಕೆ ಸಾಕ್ಷಿಯಾಯಿತು.
ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜ.18 ರಂದು ಪ್ರಾತಃ ಕಾಲ 1.15ಕ್ಕೆ ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿದರು.ಪ್ರಾತಃ ಕಾಲ 2ಕ್ಕೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭವಾಯಿತು. ಈ ವೇಳೆ ಲಕ್ಷಾಂತರ ಭಕ್ತರು ರಸ್ತೆಯ ಇಕ್ಕೆಲದಲ್ಲಿ ಕಿಕ್ಕಿರಿದು ಸೇರಿದ್ದರು.
ಬೆಳಗ್ಗೆ 5.15 ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ ಮಾಡಿ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದರ್ಶನ ಮಾಡಿದರು.
ಅದ್ದೂರಿ ಪರ್ಯಾಯ ಮುಗಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬೆಳಗ್ಗೆ 5:45ಕ್ಕೆ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಶ್ರೀ ಸರ್ವಜ್ಞ ಪೀಠಾರೋಹಣದಲ್ಲಿ ಕುಳ್ಳಿರಿಸಿದರು. ಶ್ರೀ ವೇದವರ್ಧನ ತೀರ್ಥರು ತಾಯಿಯ ಪಾದಕ್ಕೆ ನಮಿಸಿ ಸರ್ವಜ್ಞ ಪೀಠ ಏರಿದರು.
ಬೆಳಗ್ಗೆ 5:55ಕ್ಕೆ ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಸಾಂಪ್ರ ದಾಯಿಕ ದರ್ಬಾರ್ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ ನಡೆಯಿತು.
ಬೆಳಗ್ಗೆ 6.15ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಆರಂಭವಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸದ ಯದುವೀರ್ ಒಡೆಯರ್ ಸೇರಿ ಅಷ್ಟ್ ಮಠದ ಯತಿಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದರು.















