ಉಡುಪಿಯ-ಶ್ರೀಮಧ್ವಾಚಾರ್ಯ ಕರಾರ್ಚಿತ ಶ್ರೀಕೃಷ್ಣದೇವರಿಗೆ, ಶ್ರೀವಾದಿರಾಜ ಗುರುಸಾರ್ವಭೌಮ ಪ್ರತಿಷ್ಠಾಪಿತ ಶ್ರೀಮುಖ್ಯ ಪ್ರಾಣದೇವರಿಗೆ 47 ವರ್ಷಗಳ ಕಾಲ ವಿಧಿವತ್ತಾಗಿ ಪೂಜೆಗಳನ್ನು ಸಲ್ಲಿಸಿ ಪೊಡವಿಗೊಡೆಯನಿಗೆ ನಿರಂತರ ಮುನ್ನೂರು ವೈವಿದ್ಯಮಯ ಅಲಂಕಾರ ಸೇವೆಯ ಮುಖಾಂತರ ಮೂರು ವೈಭವದ ಪರ್ಯಾಯ ಮಹೋತ್ಸವವನ್ನು ಭಗವಂತನ ಪಾದಕಮಲಗಳಿಗೆ ಸಮರ್ಪಿಸಿದ ಶ್ರೀ ಶಿರೂರು ಮಠದ ಕೀರ್ತಿಶೇಷ ಪರಮಪೂಜ್ಯ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಏಳನೇವರ್ಷದ ಆರಾಧನೆಯು ವಿಶ್ವಾವಸು ಸಂ!ರದ ಕರ್ಕಾಟಕಮಾಸ ದಿನ15 ಸಲುವ ಶ್ರಾವಣಶುದ್ಧ ಸಪ್ತಮೀ ಗುರುವಾರ ಜುಲೈ 31ರಂದು ಉಡುಪಿ ರಥಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ವಿಧಿವತ್ತಾಗಿ ವೈಭವದಿಂದ ನೆರವೇರಿತು.
ಪ್ರಾತಃಕಾಲ 6.30ಕ್ಕೆ ಶ್ರೀರಾಘವೇಂದ್ರಮಠದಲ್ಲಿ
ಶ್ರೀರಾಯರ ವೃಂದಾವನದ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು. ತದನಂತರ ಶ್ರೀ ಶಿರೂರುಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರ ಮೃತ್ತಿಕಾ ವೃಂದಾವನಕ್ಕೆ ಪಿ.ಲಾತವ್ಯ ಆಚಾರ್ಯರು ಕಲಶಾಭಿಷೇಕ ಸಲ್ಲಿಸಿದರು. ವೇದಮೂರ್ತಿ ಕೆಮುಂಡೆಲ್ ಸುಬ್ರಮಣ್ಯ ಭಟ್ ಹಾಗೂ ವೇದಮೂರ್ತಿ ಗಣೇಶಣ್ಣನವರು ಧಾರ್ಮಿಕ ಪ್ರಕ್ರಿಯೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.
ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಬಂಧುಗಳು ನೆರವೇರಿಸಿದ ಈ ಆರಾಧನಾ ಮಹೋತ್ಸವದಲ್ಲಿ ಉಡುಪಿ ಶ್ರೀರಾಘವೇಂದ್ರ ಮಠದ ಮುಖ್ಯಸ್ಥರಾದ ಜಯತೀರ್ಥ ಆಚಾರ್ಯ, ಅಪ್ಪಣ್ಣ ಆಚಾರ್ಯ, ವಾಸುದೇವಣ್ಣ ಪೂರ್ವಾಶ್ರಮದ ಕುಟುಂಬಿಕರಾದ ವೇದಮೂರ್ತಿ ಅನಂತ ತಂತ್ರಿ, ಲಕ್ಷ್ಮೀನಾರಾಯಣ ತಂತ್ರಿ, ಪ್ರಹ್ಲಾದ ಆಚಾರ್ಯ ಸೊಂಡೂರು, ರಾಜಗೋಪಾಲ್, ಡಾ.ವ್ಯಾಸರಾಜ ತಂತ್ರೀ, ಪಿ.ವಾದಿರಾಜ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ.ವೃಜನಾಥ ಆಚಾರ್ಯ, ವಿ.ನಾಗೇಶ ಆಚಾರ್ಯ, ವಿ.ಮಹೇಶ ಆಚಾರ್ಯ, ರಾಜೇಂದ್ರ ಕಾರ್ಪ್ ಬ್ಯಾಂಕ್, ಮೋಹನದಾಸ ಭಟ್, ಜಯರಾಂ ರಾವ್, ಅನಂತಉಪಾಧ್ಯ ಸಾಂತ್ಯಾರ್, ರಾಜೇಂದ್ರ ಆಚಾರ್ಯ ಬಡಗುಬೆಟ್ಟು, ಶಂಕರನಾರಾಯಣ ಹೊಳ್ಳಮಿನರ್ವ ಕುಂದಾಪುರ, ಅರ್ಜುನ್ ಆಚಾರ್ಯ, ಅಕ್ಷೋಭ್ಯ ಆಚಾರ್ಯ, ವಿಶಾಲ್ ಆಚಾರ್ಯ ಸೇರಿದಂತೆ ಇನ್ನೂ ಅನೇಕ ಗಣ್ಯರು ಅತಿಥಿಗಳು ಉಪಸ್ಥಿತರಿದ್ದರು.
ಕೇಮಾರು ಸಾಂದೀಪನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿಯವರು ಶ್ರೀಕೇಮಾರುಮಠದಲ್ಲಿ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನಾ ಉತ್ಸವದ ನಿಮಿತ್ತ ವಿಶೇಷ ಪೂಜೆ ನೆರವೇರಿಸಿ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಹಾಗೂ ಉಡುಪಿ ಹಿರಿಯಡಕ ಸಮೀಪದ ಶ್ರೀಶಿರೂರಿನ ಮೂಲಮಠದಲ್ಲೂ ಕೂಡಾ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ವೈಭವದ ಆರಾಧನೆ ಜರಗಿತು.












