ಉಡುಪಿ: ದೇಶ ವಿದೇಶಗಳಲ್ಲಿ ನಿರಂತರವಾಗಿ ಸಂಚರಿಸುತ್ತಾ ಧರ್ಮಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವ ಪುತ್ತಿಗೆ ಶ್ರೀಪಾದರ ಕಾರ್ಯಯೋಜನೆ ಅಭಿನಂದನೀಯವಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ಪೂಜ್ಯ ಶ್ರೀ ರವಿಶಂಕರ ಗುರೂಜಿ ಹೇಳಿದರು.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಆಮಂತ್ರಣವನ್ನು ಪರಿಗಣಿಸಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಅವರು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾರನ್ನು ಭೇಟಿಯಾಗಿ ಶ್ರೀಕೃಷ್ಣನ ದರ್ಶನ ಮಾಡಿ ಮಾತನಾಡಿದರು.
ಆಹಾರ, ನಿಯಮ, ಅನುಷ್ಠಾನಗಳ ಆಚರಣೆಗಳಿಂದ ಯತಿಧರ್ಮದ ಕಠಿಣ ಆಚರಣೆಯನ್ನು ನಡೆಸುತ್ತಾ ಶ್ರೀಕೃಷ್ಣ ಮಂದಿರಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಸುದೀರ್ಘವಾದ ಆತ್ಮೀಯತೆ ನಮ್ಮಿಬ್ಬರಲ್ಲಿ ದೃಢವಾಗಿದೆ. ಅವರ ಪರ್ಯಾಯವು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಹಾಗೂ ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿ ಎಂದು ಶುಭಹಾರೈಸಿದರು.
ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ ಶ್ರೀ ರವಿಶಂಕರ ಗುರೂಜಿ ಅವರಲ್ಲಿ ಶ್ರೀಕೃಷ್ಣನೇ ನಿಂತು ಅಮೋಘವಾದ ಕಾರ್ಯವನ್ನು ನಡೆಸುತ್ತಿದ್ದಾನೆ. ಅಪಾರ ಶಿಷ್ಯರನ್ನು ಹೊಂದಿರುವ ರವಿಶಂಕರ ಗುರೂಜಿ ಅವರು ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ನಮ್ಮ ಉಪಾಸ್ಯನಾದ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರು ಇನ್ನೂ ಹೆಚ್ಚಿನ ಸಾಧನೆಯನ್ನು ಅವರಿಂದ ಮಾಡಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಿರಿಯ ಯತಿಗಳಾದ ಸುಶ್ರೀಂದ್ರತೀರ್ಥ ಶ್ರೀಪಾದರು, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಭಕ್ತರು ಉಪಸ್ಥಿತರಿದ್ದರು.