ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋ ಬಿಡುಗಡೆ ಮಾಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ

ಅಯೋಧ್ಯಾ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಕಳೆದ 500 ವರ್ಷಗಳಿಂದ ವಿಶ್ವದಾದ್ಯಂತದ ಭಕ್ತರು ಕಾಯುತ್ತಿರುವ ಘಳಿಗೆಗೆ ಶುಭ ಮುಹೂರ್ತ ಕೂಡಿ ಬಂದಿದೆ.

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ 22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದೆ.

ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಪ್ರಧಾನಿಯವರನ್ನು ಭೇಟಿಯಾಗಿ ಜನವರಿ 22, 2024 ರಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದ ಗರ್ಭಗೃಹದಲ್ಲಿ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸುವ ದಿನಾಂಕವನ್ನು ದೃಢಪಡಿಸಿದರು.

“ಜೈ ಸಿಯಾ ರಾಮ್! ಇಂದು ಭಾವನೆಗಳಿಂದ ತುಂಬಿರುವ ದಿನ. ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ನನ್ನ ನಿವಾಸಕ್ಕೆ ಭೇಟಿಯಾಗಲು ಬಂದಿದ್ದರು. ಶ್ರೀರಾಮ ಮಂದಿರದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದ್ದಾರೆ. ನಾನು ತುಂಬಾ ಅದೃಷ್ಟವಂತನಾಗಿದ್ದೇನೆ. ನನ್ನ ಜೀವಿತಾವಧಿಯಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ” ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯು ಜನವರಿ 14 ರಿಂದ 10 ದಿನಗಳ ಆಚರಣೆಯಾಗಲಿದೆ ಎಂದು ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಜೂನ್‌ನಲ್ಲಿ ತಿಳಿಸಿದ್ದರು.

ಮೂರು ಅಂತಸ್ತಿನ ರಾಮಮಂದಿರದ ನೆಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, ಮಕರ ಸಂಕ್ರಾಂತಿಯಂದು (ಜನವರಿ 14) ರಾಮಲಲ್ಲಾನ ಪ್ರತಿಷ್ಠಾಪನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಟ್ರಸ್ಟ್ ನಿರ್ಧರಿಸಿದೆ.