ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ: ಕಲಾವಿದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಅವರಿಗೆ ಪ್ರಶಸ್ತಿ

ಕಾರ್ಕಳ: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನ ದಿಂದ ಕೊಡಮಾಡುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನು ಜಾತ್ರೆಯ ಸಂದರ್ಭ ಕಲಾವಿದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ದಿನಕ್ಕೆ ನಾಲ್ಕು ಯಕ್ಷಗಾನ ಪ್ರದರ್ಶನ ಕ್ಕೆ ಹೋಗುತ್ತೇವೆ. ಆದರೆ ಬಾಲ- ಯುವ ಪ್ರತಿಭೆಗಳು ವೃತ್ತಿಪರ ಕಲಾವಿದರಂತೆ, ಅವರನ್ನು ಮೀರಿಸಿ ಪ್ರದರ್ಶನ ನೀಡಿದಾಗ ನಮಗೆ ಆತ್ಮತೃಪ್ತಿ ಯಾಗುತ್ತದೆ.  ಅಂಥ ಕಾರ್ಯಕ್ರಮಗಳಲ್ಲಿ ಇದೂ ಒಂದು ಎಂದರು.
ಕಲಾವಿದನಾಗಿ ಕೊಡುಗೆ ನೀಡುವುದು ಒಳ್ಳೆಯ ಕೆಲಸ. ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ಕಲಿಸಿ, ಒಳ್ಳೆಯ ಕಲಾವಿದರನ್ನು ರೂಪಿಸಿಸುವುದು ಯಕ್ಷಗಾನಕ್ಕೆ ನೀಡುವ ಅತ್ಯುತ್ಯಮ ಕೊಡುಗೆ. ಇಂಥ ನಿಸ್ವಾರ್ಥದಿಂದ ಸಮಾಜಕ್ಕೆ  ಕೊಡುಗೆ ನೀಡುವ ವರನ್ನು ಪುರಸ್ಕರಿಸುವ, ಎಳೆಯ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯಕ್ರಮ ಮಾದರಿ  ಎಂದರು.
ಸನ್ಮಾನ ಸ್ವೀಕರಿಸಿದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಮಾತನಾಡಿ, ಶಿಷ್ಯರ ಸಾಧನೆಯಲ್ಲಿಯೇ ನನಗೆ ಸಂತೃಪ್ತಿ ಎಂದರು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದ ಉಜಿರೆ ಅಶೋಕ ಭಟ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಸೌದಿ- ಬೆಹರೈನ್ ಘಟಕ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿದರು.
ಉದ್ಯಮಿ ಮುನಿಯಾಲ್ ಉದಯಕುಮಾರ್ ಶೆಟ್ಟಿ, ಉದ್ಯಮಿ ಸಚ್ಚಿದಾನಂದ ಎಡಮಲೆ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಕಮಿಷನರ್ ಶ್ರೀಕಾಂತ್ ರಾವ್, ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಉಪೇಂದ್ರ ರಾವ್, ದೇವಸ್ಥಾನ ಆಡಳಿತ ಪ್ರತಿನಿಧಿ ಗಂಗಾ ರಾಘವೇಂದ್ರ ಭಟ್, ಸುಧೀಂದ್ರ ಭಟ್ ಇದ್ದರು.
ಉಪನ್ಯಾಸಕ ಕೆ.ಪಿ.ಲಕ್ಷ್ಮೀನಾರಾಯಣ ಪ್ರಾರ್ಥಿಸಿದರು. ವೇದಮೂರ್ತಿ ಕೃಷ್ಣರಾಜೇಂದ್ರ ಭಟ್ ಸ್ವಾಗತಿಸಿದರು. ವೇದಮೂರ್ತಿ ರವೀಂದ್ರ ಭಟ್ ವಂದಿಸಿದರು. ಜಿತೇಂದ್ರ ಭಟ್ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: 
ಈ ಸಂದರ್ಭದಲ್ಲಿ ಬಲೆ ತೆಲಿಪಾಲೆ, ಮಹಾಭಾರತದಲ್ಲಿ ಭಾಗವಹಿಸಿದ ಕಲಾವಿದ ಪ್ರವೀಣ್ ಆಚಾರ್ಯ ನೆಲ್ಲಿಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಭಾಗವತ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಪ್ರಸಿದ್ಧ ಕಲಾವಿದರಿಂದ ಭಾರ್ಗವ ವಿಜಯ ಯಕ್ಷಗಾನ ನಡೆಯಿತು. ಕಾರ್ಕಳ ಸಿಂಧೂರ ಕಲಾವಿದರಿಂದ ಪನೊಡಿತ್ತುಂಡು ಸಾರಿ ತುಳು ನಾಟಕ ಪ್ರದರ್ಶನಗೊಂಡಿತು.
ಗೌರವ ಸನ್ಮಾನ:
ಪೌರೋಹಿತ್ಯ ನಡೆಸಿ, ವಿಶ್ರಾಂತ ಜೀವನ ನಡೆಸುತ್ತಿರುವ ಇರ್ವತ್ತೂರು ಶ್ರೀನಿವಾಸ ಜೋಯಿಸ ಅವರನ್ನು ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.
ಫೋಟೊ: ಶರತ್ ಕಾನಂಗಿ