ದೊಡ್ಡಣ್ಣಗುಡ್ಡೆ: ಸೆ. 27 ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ

ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೆ. 27, ಬುಧವಾರದಂದು ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ ನೆರವೇರಲಿದೆ. ಬಹು ವಿಶೇಷವೂ ಫಲಪ್ರದವೂ ಆದ ಈ ಮಹಾನ್ ಪೂಜೆಯನ್ನು ಕಣ್ತುಂಬಿಸಿಕೊಂಡು ಶ್ರೀ ರಾಜರಾಜೇಶ್ವರಿಯ ಅನುಗ್ರಹಕ್ಕೆ ಪಾತ್ರರಾಗಲು ಅವಕಾಶವಿದೆ. ಸೇವಾರ್ಥಿಯೋರ್ವರ ಪ್ರಾಯಶ್ಚಿತ್ತ ಪೂರ್ವಕವಾಗಿ ಈ ಪೂಜೆ ನೆರವೇರಲಿದೆ.

ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾದಾರರ ಬಾಪ್ತು ಕ್ಷೇತ್ರಕ್ಕೆ ಸಮರ್ಪಿತವಾಗಲಿದೆ. ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಪೂಜೆಯು ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ. ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕಾರಾದನೆ ನೆರವೇರಲಿದೆ.
ವಿಧ ವಿಧದ ಕುಸುಮಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ಬೆಳಗ್ಗಿನ ಸುಮುಹೂರ್ತ ದಲ್ಲಿ ಚತುರ್ ವಿಂಷತಿ ನಾರೀಕೇಳ ಗಣ ಯಾಗ ಹಾಗೂ ಶ್ರೀಚಕ್ರ ಮಂಡಲ ರಚನೆಗೆ ಬಿಂದು ಪ್ರಕ್ರಿಯೆ ನೆರವೇರಲಿದೆ.
ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ ವಿತರಣೆಯಾಗಲಿದೆ.

ವಿಶೇಷ ಆಕರ್ಷಣೆಯಾಗಿ ಅಷ್ಟಾವಧಾನ ಸೇವೆಯಲ್ಲಿ ನೃತ್ಯ ಸೇವೆ ಹಾಗೂ ಸುಬ್ರಮಣ್ಯ ಕಾರಂತ ಮತ್ತು ಬಳಗದವರಿಂದ ವೇದಪಾರಾಯಣ ಸಂಕೀರ್ತನೆ, ನಾಗೇಂದ್ರ ಕುಡುಪು ಅವರಿಂದ ನಾದ ಸೇವೆ ಮುರಳಿದರ ಮುದ್ರಾಡಿ ಮತ್ತು ತಂಡದವರಿಂದ ನಾದಸ್ವರ ವಾದನ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ ತಿಳಿಸಿದ್ದಾರೆ.