ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಏಕಕಾಲ ಶ್ರೀಚಕ್ರ ಮಂಡಲ ಪೂಜೆಯು ಅಭೂತಪೂರ್ವವಾಗಿ ಸಂಪನ್ನಗೊಂಡಿತು.
ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಋತ್ವಿಜೋತ್ತಮರ ಸಮಕ್ಷಮದಲ್ಲಿ ಬಹು ವಿಜೃಂಭಣೆಯಿಂದ ಪೂಜೆ ಸಂಪನ್ನಗೊಂಡಿತು.
ಶ್ರೀಚಕ್ರ ಮಾತೆಯಾದ ರಾಜರಾಜೇಶ್ವರಿ ದೇವಿಯನ್ನು ಲಲಿತಾ ಸ್ತುತಿಯೊಂದಿಗೆ ಆರಾಧಿಸಿ ಸಂಪ್ರೀತಗೊಳಿಸುವ ಈ ಮಹಾನ್ ಪೂಜೆಗಾಗಿ ವಿಶೇಷವಾಗಿ ರಚಿಸಲ್ಪಟ್ಟ ಹೂವಿನ ಅಲಂಕೃತ ಮಂಟಪದೊಳಗೆ ಪಂಚವರ್ಣಾತ್ಮಕವಾಗಿ ರಚಿಸಲ್ಪಟ್ಟ ಶ್ರೀ ಚಕ್ರ ಯಂತ್ರ ಮಂಡಲದಲ್ಲಿ ತತ್ ದೇವತೆಗಳನ್ನು ಆಹ್ವಾನಿಸಿ ಆಕೆಯ ಸ್ತುತಿಯನ್ನು ಮಾಡಿ ವಿಧ ವಿಧದ ಕುಸುಮಗಳಿಂದ ಅರ್ಜಿಸಿ ಹತ್ತಾರು ಬಗೆಯ ನೈವೇದ್ಯವನ್ನು ಸಮರ್ಪಸಿ ಫಲ ಪುಷ್ಪಗಳಿಂದ ಅಲಂಕೃತಗೊಳಿಸಿದ ಆರತಿಯನ್ನು ಬೆಳಗಿ ಅಷ್ಟಾವಧಾನ ಸೇವೆಯೊಂದಿಗೆ ರಾಜ್ಯೋಪಚಾರ ಪೂಜೆಯನ್ನು ನೆರವೇರಿಸಿ ಜಗದಂಬೆಯ ಅನುಗ್ರಹವನ್ನು ಯಾಚಿಸಲಾಯಿತು.
ಅಷ್ಟಾವಧಾನ ಸೇವಯು ಸುಬ್ರಹ್ಮಣ್ಯ ಕಾರಂತ್ ಮತ್ತು ಶ್ರೀಹರಿ ಉಪಾಧ್ಯಾಯ ಅವರಿಂದ ಹಾಗೂ ನಾಗೇಂದ್ರ ಕುಡುಪು ಮತ್ತು ಬಳಗದವರಿಂದ ಪಂಚವಾದ್ಯ ಸೇವೆ , ಮುರಳಿಧರ ಮುದ್ರಾಡಿ ಮತ್ತು ತಂಡದವರಿಂದ ನಾದಸ್ವರ ವಾದನ ಸಂಗೀತ ಸೇವೆ, ಅರವಿಂದ ಹೆಬ್ಬಾರ್ ಕುಮಾರಿ ಸಮನ್ವಿ ಹಾಗೂ ಶ್ರೀಮತಿ ಚಂದ್ರಕಲಾ ನೃತ್ಯ ಸೇವೆ, ಕುಮಾರಿ ಸಿಂಚನ ಎಮ್ ಭಟ್, ಶಿವಕುಮಾರ ಬಾರಿತ್ತಾಯ ಅವರಿಂದ ನೈವೇದ್ಯ ಸೇವೆ ಹಾಗೂ ಅಲಂಕೃತ ಆರತಿ ಸೇವೆ ಹಾಗೂ ಅರ್ಚಕ ಅನೀಶ್ ಅವರಿಂದ ಮಹಾಪೂಜೆ ನೆರವೇರಿತು.
ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ದಂಪತಿ ಆಚಾರ್ಯ ಕನ್ನಿಕ ವಟು ಆರಾಧನೆಗಳು ನೆರವೇರಿತು.
ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಅವರು ದೀಪ ಪ್ರಜ್ವಲಿಸಿ ಪಂಚವರ್ನಾತ್ಮಕವಾದ ಬಿಂದುವನ್ನು ರಚಿಸಿ ಶ್ರೀಚಕ್ರ ಮಂಡಲ ರಚನೆಗೆ ಚಾಲನೆ ನೀಡಿದರು.
ಈ ಮಹಾನ್ ಪೂಜೆಯನ್ನು ಕಿಕ್ಕರಿದ ಭಕ್ತ ಸಮೂಹ ಕಣ್ತುಂಬಿಸಿಕೊಂಡರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.