ಉಡುಪಿ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯನ ದೇಹ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲರಾಗಿರುವುದರೊಂದಿಗೆ ಸದೃಢ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಯುವ ಜನರು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಸದೃಢ ಆರೋಗ್ಯ ಹೊಂದಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.
ಅವರು ಶುಕ್ರವಾರ ತೆಂಕನಿಡಿಯೂರು ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಲಯನ್ಸ್ ಕ್ಲಬ್ ಉಡುಪಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ – ಕುಂದಾಪುರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮೇಜರ್ ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡುತ್ತಿದ್ದರು.

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟಿದ ದಿನವಾದ ಶುಕ್ರವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ್ನನ್ನಾಗಿ ಆಚರಿಸಲಾಗುತ್ತಿದೆ. ಯುವಜನತೆ ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ದೇಶಪ್ರೇಮದ ಮನೋಭಾವ ನಮ್ಮ ಯುವಜನರಲ್ಲಿ ಹೆಚ್ಚಿದೆ. ಇದು ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಫಿಟ್ ಇಂಡಿಯಾ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿ, ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಇಂದು ರಾಷ್ಟಿçÃಯ ಕ್ರೀಡಾ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಇಂದಿನ ಯುವಪೀಳಿಗೆ ಕಲಿಕೆಯ ಜೊತೆಜೊತೆಗೆ ಧ್ಯಾನ್‌ಚಂದ್ ರಂತೆ ಕ್ರೀಡಾ ಮನೋಭಾವ, ಸಂಯಮ, ಆತ್ಮವಿಶ್ವಾಸ, ದೃಢನಿರ್ಧಾರವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಆಗ ಮಾತ್ರ ಜೀವನದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ಇದರ ಸದ್ಬಳಕೆಯನ್ನು ಪ್ರತಿಯೊಬ್ಬ ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಎಂದರು.
ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಜಯಕರ ಶೆಟ್ಟಿ ರಕ್ತದಾನದ ಮಹತ್ವದ ಕುರಿತು ಮಾತನಾಡಿ, ಭಾರತದ ಶ್ರೇಷ್ಠ ಕ್ರೀಡಾಪಟು ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ನೆನಪಿಗಾಗಿ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ರಕ್ತದಾನ ಶಿಬಿರ ದಂತಹ ಪುಣ್ಯದ ಕೆಲಸಗಳನ್ನು ಆಯೋಜಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಜೀವಜಲವಾದ ರಕ್ತವನ್ನು ದಾನ ಮಾಡುವಂತಹ ಕಾರ್ಯಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು. ಒಂದು ಯೂನಿಟ್ ರಕ್ತದಿಂದ ಮೂರು ಜನರ ಜೀವವನ್ನು ಉಳಿಸಲು ಸಾಧ್ಯ. ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ಹಲವಾರು ಪರೀಕ್ಷೆಗಳನ್ನು ನಡೆಸಿ, ಪ್ರಾಣಾಪಾಯದಲ್ಲಿರುವ ರೋಗಿಗಳಿಗೆ ನೀಡಲಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಇದಕ್ಕೆ ಪರ್ಯಾಯ ವಸ್ತುವೂ ಇಲ್ಲ. ಆದ್ದರಿಂದ ಯುವಪೀಳಿಗೆ ಜೀವ ಉಳಿಸುವ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದರು.
ಶಾಸಕ ಯಶ್‌ಪಾಲ್ ಎ ಸುವರ್ಣ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಅವಿಭಾಜಕ ಅಂಗ ಕ್ರೀಡೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಅವುಗಳ ಪ್ರಯೋಜನವನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು. ಶೈಕ್ಷಣಿಕವಾಗಿ ಜಿಲ್ಲೆಯು ಮುಂಚೂಣಿಯಲ್ಲಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ಸಾಧನೆಯನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕ್ರೀಡಾ ಪ್ರತಿಭೆಗಳು ಭಾಗವಹಿಸಿ, ಪ್ರಶಸ್ತಿಗಳನ್ನು ಮುಡಿಗೇರಿಸಕೊಳ್ಳುವ ಮೂಲಕ ಉಡುಪಿ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದ ಅವರು, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಯುವಸಮೂಹ ಮುಂದೆ ಬಂದು ರಕ್ತದಾನದಂತಹ ಜೀವ ಉಳಿಸುವ ಕಾರ್ಯದಲ್ಲಿ ಭಾಗವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಸದ್ ಖೇಲ್ ಮಹೋತ್ಸವ್ ವೆಬ್‌ಸೈಟ್ ಅನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ದಿನೇಶ್ ಕಿಣಿ, ತೆಂಕನಿಡಿಯೂರು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್, ಕಾಲೇಜಿನ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು, ಕುಂದಾಪುರ ರಕ್ತನಿಧಿ ಕೇಂದ್ರದ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ನೀಲಾವರ ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.












