ಮಾರ್ಚ್ 2 ರಂದು ಉಭಯ ಜಿಲ್ಲೆಗಳ ಸ್ಥಳಿಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗಾಗಿ ‘ಹೊಂಬೆಳಕು’ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಮತ್ತು ಸಿಬ್ಬಂದಿಗೆ ಅಡ್ಯಾರ್‌ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ‘ಹೊಂಬೆಳಕು’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಮಾರ್ಚ್ 2 ರಂದು ಗ್ರಾಮ ಸ್ವರಾಜ್ ಟ್ರಸ್ಟ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ನ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಂಚಾಯತ್‌ ರಾಜ್ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಸದಾ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರ ಒತ್ತಡ ನಿರ್ಮೂಲನೆಗಾಗಿ ಈ ಕೂಟವನ್ನು ಆಯೋಜಿಸಲಾಗಿದೆ. ಪಂಚಾಯತ್‌ ರಾಜ್‌ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಪರಸ್ಪರ ಬೆರೆಯುವ ಅವಕಾಶ ಕಡಿಮೆ. ಅವರ ಸಂಗಮಕ್ಕೆ ಅವಕಾಶ ಕಲ್ಪಿಸುವ ಈ ಸ್ಪರ್ಧಾಕೂಟ ಪರಸ್ಪರ ಸೌಹಾರ್ದ ಬೆಳೆಸಲು ನೆರವಾಗಲಿದೆ ಎಂದರು.

ಮಾರ್ಚ್ 2ರಂದು ಬೆಳಿಗ್ಗೆ ಆಕರ್ಷಕ ಪಥ ಸಂಚಲನ ನಡೆಯಲಿದೆ. ಅತ್ಯುತ್ತಮ ನಿರ್ವಹಣೆ ತೋರುವ ತಂಡಗಳಿಗೆ ಮೊದಲ ಬಹುಮಾನ 50 ಸಾವಿರ, ಎರಡನೇ ಬಹುಮಾನ 25 ಸಾವಿರ ಹಾಗೂ ಮೂರನೇ ಬಹುಮಾನ 10 ಸಾವಿರ ನೀಡಲಾಗುವುದು. ಗುಂಪು ಹಾಗೂ ವೈಯುಕ್ತಿಕ ವಿಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ. ಸುಮಾರು 5 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಭಾಗವಹಿಸುವ ಸ್ಪರ್ಧೆಗಳೂ ಇರಲಿವೆ. ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಉಭಯ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆ ಪ್ರತಿನಿಧಿಗಳು ಈ ಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕೂಟದಲ್ಲಿ ಭಾಗವಹಿಸುವವರು ತಮ್ಮ ಸಂಸ್ಥೆಗಳಿಂದ ಪ್ರಯಾಣ ಭತ್ಯೆ ಪಡೆಯಲು ಅವಕಾಶವಿದೆ. ಎಲ್ಲ ಸ್ಪರ್ಧಿಗಳಿಗೆ ಸ್ಮರಣಿಕೆ, ಟಿ–ಶರ್ಟ್ ಹಾಗೂ ಕ್ಯಾಪ್‌ ನೀಡಲಾಗುವುದು. ಪ್ರತಿ ಸ್ಪರ್ಧೆಯ ವಿಜೇತರಿಗೂ ನಗದು ಬಹುಮಾನವಿದೆ ಎಂದರು.

ನೋಂದಣಿ ಕಡ್ಡಾಯ: ಆನ್ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಸ್ಪರ್ಧಿಗಳು ಫೆ. 28ರ ಒಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್‌ ಕಟೀಲ್‌ ಹಾಗೂ ಉಭಯ ಜಿಲ್ಲೆಗಳ ಶಾಸಕರು ಈ ಕೂಟದಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಗೌರವ ಸಲಹೆಗಾರರಾದ ಹರೀಶ್ ಕುಮಾರ್ ಕೆ., ಗ್ರಾಮ ಸ್ವರಾಜ್ ಟ್ರಸ್ಟ್ ಅಧ್ಯಕ್ಷ ಕೆ.ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಲಾರೆನ್ಸ್ ಡಿಸೋಜ, ಖಜಾಂಚಿ ಪ್ರವೀಣ್‌ಚಂದ್ರ ಆಳ್ವ ಭಾಗವಹಿಸಿದ್ದರು.