ಜಗತ್ತಿನಾದ್ಯಂತ ಬಿಡುಗಡೆಗೊಂಡು ಗಲ್ಲಪೆಟ್ಟಿಗೆ ದೋಚುತ್ತಿರುವ ಸ್ಪೈಡರ್‌ಮ್ಯಾನ್ ಫಾರ್‌ಹೋಮ್ ಚಲನಚಿತ್ರ ಭಾರತದಲ್ಲಿ ಮೊದಲದಿನವೇ (ಗುರುವಾರ) 10 ಕೋಟಿ ರೂ.,ಗಳಿಕೆ ಮಾಡಿದೆ. ಟಾಮ್ ಹಾಲೆಂಡ್ ಅಭಿನಯದ, ವಾರ್ವಲ್ ಸಿನಿಮ್ಯಾಟಿಕ್ ಯೂನಿವರ್ಸ್ ನಿರ್ಮಾಣದ ಸ್ಪೈಡರ್ ಭಾರತದಲ್ಲಿ ಉತ್ತಮ ಆರಂಭವನ್ನು ಪಡೆದಿದೆ.
ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರುಣ್ ಆದರ್ಶ್ ಅಂಕಿ ಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ಹಾಲಿವುಡ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವುದನ್ನು ಮುಂದುವರೆಸುತ್ತಿದೆ. ಸ್ಪೈಡರ್‌ಮ್ಯಾನ್ ಗಳಿಕೆ ಬಗ್ಗೆ ಚುಟುಕಾಗಿ ವಿಶ್ಲೇಷಿಸಿದ್ದಾರೆ. ವಾರಂತ್ಯದಲ್ಲಿ ಗಳಿಕೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಸ್ಪೈಡರ್‌ಮ್ಯಾನ್‌ನ ಮಾರ್ಗದರ್ಶಕ ಮತ್ತು ತಂದೆಯ ಸ್ಥಾನದಲ್ಲಿದ್ದ ಐರನ್‌ಮ್ಯಾನ್‌ನ ಹೃದಯ ವಿದ್ರಾವಕ ಸಾವಿನ (ಅವೆಂಜರ್ಸ್ ಎಂಡ್‌ಗೇಮ್ ಸಿನಿಮಾದಲ್ಲಿ)ನಂತರ ಸ್ಪೈಡರ್‌ಮ್ಯಾನ್ ತೆರೆಮರೆಯಲ್ಲಿರುತ್ತಾನೆ. ಆದರೆ ಭೂಮಿಗೆ ಅಪಾಯ ಇರುವುದನ್ನು ಅರಿತ ಸ್ಪೈಡರ್‌ಮ್ಯಾನ್ ಅಪಾಯಕಾರಿ ದಾತುಜೀವಿಗಳಿಂದ ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೋರಾಡಲು ಸಿದ್ಧನಾಗುತ್ತಾನೆ.
ಜಗತ್ತಿನ ಬಹುತೇಕ ಖ್ಯಾತ ಸಿನಿಮ ವಿಮರ್ಶಕರಿಂದ ಅತೀವ ಮೆಚ್ಚುಗೆ ಪಡೆದ ಸ್ಪೈಡರ್‌ಮ್ಯಾನ್‌ಗೆ ಭಾರತ ಸಿನಿ ವಿಮರ್ಶಕರು ಉತ್ತಮ ರೇಟಿಂಗ್ಸ್ ನೀಡಿದ್ದಾರೆ. ಒಟ್ಟಿನಲ್ಲಿ ಮಾರ್ವಲ್ ಅಭಿಮಾನಿಗಳಿಗೆ ಅವೆಂಜರ್ಸ್ ಎಂಡ್‌ಗೇಮ್ ಬಳಿಕ ಸ್ಪೈಡರ್‌ಮ್ಯಾನ್ ಹಬ್ಬದೂಟವಾಗಿದೆ.