ಹಾಲಿವುಡ್ನ ಜನಪ್ರಿಯ ಸೂಪರ್ಹೀರೋ ಸರಣಿಗಳಲ್ಲೊಂದು ‘Spider-Man’ ಮತ್ತೊಮ್ಮೆ ಭಾರತೀಯ ಸಿನಿಪ್ರಿಯರನ್ನು ರಂಜಿಸಲು ಸಜ್ಜಾಗಿದೆ. ಇದೇ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿರುವ ‘Spider-Man: Brand New Day’ ಚಿತ್ರದ ಮೇಲೆ ಭಾರೀ ನಿರೀಕ್ಷೆ ವ್ಯಕ್ತವಾಗಿದ್ದು, ಬಿಡುಗಡೆಯ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಹೊಸ ದಾಖಲೆಗಳತ್ತ ಸಿನಿಮಾ ದಾಪುಗಾಲು ಇಡುತ್ತಿದೆ.
ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯಿದ್ದು, ಅದರಲ್ಲೂ ಸ್ಪೈಡರ್‌ಮ್ಯಾನ್ ಸರಣಿಗೆ ಅಪಾರ ಅಭಿಮಾನಿ ಬಳಗವಿದೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆಯಾಗಲು ಇನ್ನೂ ಎಂಟು ದಿನ ಬಾಕಿ ಇರುವಾಗಲೇ ದೇಶದ ವಿವಿಧ ಮಲ್ಟಿಪ್ಲೆಕ್ಸ್‌ಗಳಲ್ಲಿ 1.55 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ.

ಈ ಹಿಂದೆ ಬಿಡುಗಡೆಯಾಗಿದ್ದ ‘Spider-Man: No Way Home’ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಅಡ್ವಾನ್ಸ್ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಇದೀಗ ‘Brand New Day’ ಕೂಡ ಆ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎಂದು ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈವರೆಗೆ ನಡೆದಿರುವ ಅಡ್ವಾನ್ಸ್ ಬುಕ್ಕಿಂಗ್ ಆಧರಿಸಿ, ಸಿನಿಮಾ ಮೊದಲ ದಿನವೇ ₹40 ರಿಂದ ₹48 ಕೋಟಿ ವರೆಗೆ ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಅಂದಾಜಿಸಿದ್ದಾರೆ.

ಗಮನಾರ್ಹವಾಗಿ, ‘Spider-Man: No Way Home’ ಭಾರತದಲ್ಲಿ ಸುಮಾರು ₹265 ಕೋಟಿ ಕಲೆಕ್ಷನ್ ಮಾಡಿತ್ತು. ಆ ಸಂದರ್ಭದಲ್ಲಿ ‘ಪುಷ್ಪ’ ಚಿತ್ರದ ಪ್ರಬಲ ಸ್ಪರ್ಧೆಯ ನಡುವೆಯೂ ಈ ಸಾಧನೆ ಮಾಡಿತ್ತು. ಇದೇ ಹಿನ್ನೆಲೆ ‘Spider-Man: Brand New Day’ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.















