ಮಂಗಳೂರು: ಇಲ್ಲಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಬಿರುಸಿನ ಕಾಮಗಾರಿ ನಡೆಯುತ್ತಿದ್ದು, ವಾಸ್ತುಶಾಸ್ತ್ರದಲ್ಲಿ ನಂಬಿಕೆ ಇಟ್ಟಿರುವ ಪಕ್ಷದ ಮುಖಂಡರೊಬ್ಬರು ಅಧ್ಯಕ್ಷರ ಅನುಮತಿ ಮೇರೆಗೆ ಈ ನವೀಕರಣ ಕಾಮಗಾರಿ ನಡೆಸಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಕಾಂಗ್ರೆಸ್ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ನವೀಕರಣ ಸೇರಿದಂತೆ ಇತರ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ವಾಸ್ತುದೋಷ ನಿವಾರಣೆಗಾಗಿ ಈ ಕೆಲಸ ಮಾಡಲಾಗಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಇದನ್ನು ತಳ್ಳಿ ಹಾಕಿರುವ ಕಾಂಗ್ರೆಸ್, ನೀರಿನ ಟ್ಯಾಂಕಿಯ ಮತ್ತು ಮೆಟ್ಟಿಲಿನ ದುರಸ್ತಿ ಮಾಡಲಾಗಿದೆ ಎಂದಿದ್ದಾರೆ.
8 ಮೆಟ್ಟಿಲುಗಳು ದುರದೃಷ್ಟಕರ?
ಈ ಹಿಂದೆ ಕಾಂಗ್ರೆಸ್ ಕಚೇರಿಯ ಪ್ರವೇಶದ್ವಾರದಲ್ಲಿ 8 ಮೆಟ್ಟಿಲುಗಳಿದ್ದವು. ಇದು ವಾಸ್ತುಪ್ರಕಾರ ಸರಿಯಿಲ್ಲ, ಬೆಸ ಸಂಖ್ಯೆಯ ಮೆಟ್ಟಿಲುಗಳನ್ನು ಹಾಕಬೇಕು ಎಂಬ ನಿಟ್ಟಿನಲ್ಲಿ ಈ ಕಾಮಗಾರಿ ನಡೆಸಲಾಗಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಇದಲ್ಲದೆ, ಕಚೇರಿಯೊಳಗಿನ ಒಂದು ಶೌಚಾಲಯವನ್ನು ಕೂಡಾ ಮುಚ್ಚಲಾಗಿದೆ ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಿಂದ ನಗರಪಾಲಿಕೆಯಿಂದ ಹಿಡಿದು ಪಾರ್ಲಿಮೆಂಟ್ ವರೆಗಿನ ಹಲವಾರು ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು, ಈ ಬಾರಿ ಅದೃಷ್ಟ ಪರೀಕ್ಷೆಗಾಗಿ ಕಚೇರಿಯೊಳಗಿನ ವಾಸ್ತು ಬದಲಾವಣೆಯ ಮೊರೆ ಹೊಕ್ಕಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ ಕಾಂಗ್ರೆಸ್ ಮಾತ್ರ ಇದನ್ನು ಅಲ್ಲಗಳೆದಿದೆ.