ಶಾಲಾ ಮಕ್ಕಳ ಬ್ಯಾಗ್​ಗೆ ನಿರ್ದಿಷ್ಟ ತೂಕ: ನಿಗದಿಗೊಳಿಸಿದ ಸರ್ಕಾರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಣಭಾರದ ಶಾಲಾ ಬ್ಯಾಗ್ ದೊಡ್ಡ ಸಮಸ್ಯೆಯಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಶಾಲಾ ಬ್ಯಾಗ್​ಗಳ ಭಾರವನ್ನು ನಿಗದಿಪಡಿಸಿದೆ. ಹೆಚ್ಚುವರಿ ಭಾರವನ್ನು ವಿದ್ಯಾರ್ಥಿಗಳ ಬೆನ್ನಿನಿಂದ ಕೆಳಗಿಳಿಸುತ್ತಿದೆ. ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಕೊಂಚ ನೆಮ್ಮದಿ ತಂದಿದೆ.ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಣಭಾರದ ಶಾಲಾ ಬ್ಯಾಗ್ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಕೆಲ ಮಹತ್ವದ ಸೂಚನೆಗಳೊಂದಿಗೆ ಸುತ್ತೋಲೆ ಹೊರಡಿಸಿದೆ.

ಅತಿಯಾದ ಪುಸ್ತಕ ಇತ್ಯಾದಿ ಹೊತ್ತಿಗಳ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ತೂಕದ ಬ್ಯಾಗ್ ಹೊತ್ತು ಶಾಲೆಗಳಿಗೆ ತೆರಳುತ್ತಾರೆ. ಇದರಿಂದಾಗಿ ಮಕ್ಕಳ ಬೆನ್ನು ಮೂಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೂ ಪೋಷಕರು ಮತ್ತು ಶಿಕ್ಷಕರು ಇದರ ಬಗ್ಗೆ ಅಷ್ಟು ಗಮನ ಹರಿಸಿಲ್ಲ. ಆದರೆ ಈ ಸಮಸ್ಯೆಯ ಗಂಭೀರತೆ ಅರ್ಥ ಮಾಡಿಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿದ್ಯಾರ್ಥಿಗಳ ಬೆನ್ನ ಮೇಲಿನ ಶಾಲಾ ಬ್ಯಾಗ್ ಭಾರವನ್ನು ಕೊಂಚ ಇಳಿಸಿದೆ.

ಮಕ್ಕಳಿಗೆ ಶಾಲಾ ಬ್ಯಾಗ್ ತೂಕದ ವಿವರ:
1-2ನೇ ತರಗತಿವರೆಗೆ 1.5-2 ಕೆಜಿ
3-5ನೇ ತರಗತಿವರೆಗೆ 5-3 ಕೆಜಿ
6-8ನೇ ತರಗತಿವರೆಗೆ 3-4 ಕೆಜಿ
9-10ನೇ ತರಗತಿವರೆಗೆ 4-5 ಕೆಜಿ ವರೆಗೆ ಶಾಲಾ ಬ್ಯಾಗ್​ಗಳನ್ನು ಕೊಂಡೊಯ್ಯಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಸೂಚನೆ:

1 ಮತ್ತು 2ನೇ ತರಗತಿ ಬೋಧನೆಯು ಬುನಾದಿ ಹಂತದ ಶಿಕ್ಷಣವಾಗಿದೆ. ವಿದ್ಯಾರ್ಥಿಗಳು ಸಂತಸ ಮತ್ತು ಸಕ್ರಿಯವಾಗಿ ಶಾಲೆಗಳಲ್ಲಿಯೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡುವುದು, ಈ ವಿದ್ಯಾರ್ಥಿಗಳಿಗೆ ಕಲಿಕೆಯ ಪುನರ್ಬಲನಕ್ಕಾಗಿ ಯಾವುದೇ ರೀತಿಯ ಗೃಹಪಾಠ ಅಥವಾ ಮನೆಗೆಲಸ ನೀಡದಂತೆ ಕ್ರಮ ವಹಿಸುವುದು.
1ರಿಂದ 05ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭಾಷೆ, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸದಂತೆ ಕ್ರಮ ವಹಿಸುವುದು.
3ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲಿಕಾ ಬಲವರ್ಧನೆ ಚಟುವಟಿಕೆಗಳನ್ನು ಶಾಲೆಗಳಲ್ಲಿಯೇ ನಿರ್ವಹಿಸುವುದು. ಅತ್ಯಂತ ಅಗತ್ಯವಿರುವ ಹಾಗೂ ಪೂರಕವಾಗಿರುವಂತಹ ಚಟುವಟಿಕೆಗಳಿಗೆ ಸೀಮಿತ ಪ್ರಮಾಣದಲ್ಲಿ ಮನೆಗೆಲಸ ನೀಡುವಂತೆ ಕ್ರಮ ವಹಿಸುವುದು.
ವಿದ್ಯಾರ್ಥಿಗಳು ಕಲಿಕೆಯ ಎಲ್ಲಾ ಪಠ್ಯ ಪುಸ್ತಕಗಳು/ನೋಟ್ ಪುಸ್ತಕಗಳು ಮತ್ತು ಅಭ್ಯಾಸ ಪುಸ್ತಕಗಳನ್ನು ಪ್ರತಿ ದಿನವು ತರುವುದನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಆಯಾ ದಿವಸದ ವೇಳಾಪಟ್ಟಿಗೆ ಅನುಗುಣವಾಗಿ ಅಗತ್ಯವಿರುವ ಪುಸ್ತಕಗಳನ್ನು ಮಾತ್ರ ಶಾಲೆಗೆ ತರಲು ಸೂಚನೆ ನೀಡುವುದು.
ಅಭ್ಯಾಸ ಚಟುವಟಿಕೆಗಳನ್ನು ಹಾಳೆಗಳಲ್ಲಿ ಮಾಡಿಸಿ ಫೈಲ್ ಮಾಡಿಸುವುದು. ಅವಶ್ಯಕತೆ ಇದ್ದಾಗ ಪರಾಮರ್ಶಿಸಲು ಇವುಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡಲು ಪ್ರೇರೇಪಿಸುವುದು ಅಥವಾ ಅಭ್ಯಾಸ ಪುಸ್ತಕಗಳನ್ನು ಬಳಸಿದಲ್ಲಿ ಇವುಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡತಕ್ಕದ್ದು.
ವಿದ್ಯಾರ್ಥಿಯು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುವ ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು, ಲೇಖನ ಸಾಮಗ್ರಿಗಳು, ಕಲಿಕಾ ಉಪಕರಣಗಳು ಹಾಗೂ ಇನ್ನಿತರ ವಸ್ತುಗಳನ್ನು ತರಗತಿ ಒಳಗೆ ಶೇಖರಿಸಿಡುವಂತೆ ಅಗತ್ಯ ಅನುಕೂಲತೆಗಳನ್ನು ಕಲ್ಪಿಸತಕ್ಕದ್ದು.
ಶಾಲಾ ಗ್ರಂಥಾಲಯಗಳಲ್ಲಿ ಶಬ್ಧಕೋಶ, ಸಮಾನಾರ್ಥಕ ಪದಕೋಶ, ಅಟ್ಲಾಸ್, ಜ್ಞಾನ ವಿಜ್ಞಾನಕೋಶಗಳಂತಹ ಪರಾಮರ್ಶನ ಸಾಮಗ್ರಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವಂತೆ ಹಾಗೂ ಮಕ್ಕಳು ಇವುಗಳನ್ನು ಅವಶ್ಯಕತೆ ಇದ್ದಾಗ ಬಳಸಿಕೊಳ್ಳುವಂತೆ ವ್ಯವಸ್ಥೆ ಮಾಡುವುದು.
100ರಿಂದ 200 ಪುಟ ಮೀರದ ನೋಟ್ ಪುಸ್ತಕಗಳನ್ನು ಬಳಸುವಂತೆ ಕ್ರಮ ವಹಿಸುವುದು.
ಕಡಿಮೆ ಖರ್ಚಿನ ಹಗುರವಾದ ಹಾಗೂ ದೀರ್ಘಕಾಲ ಬಾಳಿಕೆ ಬರುವಂತಹ ಶಾಲಾ ಬ್ಯಾಗ್ ಹಾಗೂ ಇತರೆ ಸಾಮಗ್ರಿಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು.
ಮಕ್ಕಳು ಶಾಲೆಗಳಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದನ್ನು ತಪ್ಪಿಸಲು ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಲೆಯಲ್ಲಿಯೇ ಕಲ್ಪಿಸತಕ್ಕದ್ದು.
ಅತಿಯಾದ ಹೊರೆ ಇರುವ ಶಾಲಾ ಬ್ಯಾಗ್‌ನಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು.

ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊರೆಯಿಲ್ಲದೇ ಸಂತಸದಾಯಕವಾಗಿ ಕಲಿಯುವ ವಾತಾವರಣ ರೂಪಿಸುವ ಸಲುವಾಗಿ ಬೆಂಗಳೂರಿನ ಎನ್‌ಎಲ್‌ಎಸ್ಯುಎಲ್‌ಐ (NLSULI), ಸೆಂಟರ್ ಫಾರ್ ಚೈಲ್ಡ್ ಅಂಡ್ ಲಾ ಸಹಯೋಗದಲ್ಲಿ ಎಸ್.ಇ.ಆರ್.ಟಿ ಸಂಸ್ಥೆ ಮಕ್ಕಳು ಶಾಲೆಗಳಿಗೆ ತೆಗೆದುಕೊಂಡು ಹೋಗುತ್ತಿರುವ ಬ್ಯಾಗ್ ಭಾರದ ಕುರಿತು ಒಂದು ಅಧ್ಯಯನ ನಡೆಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಈ ವರದಿಯಲ್ಲಿ ವಿದ್ಯಾರ್ಥಿಗಳು ಅವರ ದೇಹದ ತೂಕದ ಶೇಕಡ 10ರಿಂದ 15ರಷ್ಟು ತೂಕದ ಶಾಲಾ ಬ್ಯಾಗ್‌ ತೆಗೆದುಕೊಂಡು ಹೋಗಬಹುದಾಗಿ ಮೂಳೆ ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಅದರಂತೆ ಮಕ್ಕಳ ಶಾಲಾ ಬ್ಯಾಗ್ ತೂಕ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ. ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಶಾಲೆಗಳಲ್ಲಿ 1- 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.