ಪೆರಂಪಳ್ಳಿ: ‘ಸೂಕ್ಷ್ಮತೆಯಿಂದ ಬೋಧನೆ’ ವಿಚಾರದ ಕುರಿತು ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ

ಪೆರಂಪಳ್ಳಿ: ರೋಟರಿ ಕ್ಲಬ್ ಮಣಿಪಾಲ ನಗರ ಮತ್ತು ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ಇದರ ಸಹಯೋಗದೊಂದಿಗೆ, “ಸೂಕ್ಷ್ಮತೆಯಿಂದ ಬೋಧನೆ” ಎಂಬ ವಿಚಾರದ ಕುರಿತು ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ ನಡೆಯಿತು. ಮಣಿಪಾಲ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ದೀಪಾ ಮರೀನಾ ರಸ್ಕೀನಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಶಿಕ್ಷಕರ ಪಾತ್ರ ಮತ್ತು ಒತ್ತಡ ನಿರ್ವಹಣೆ ಎಂಬ ವಿಷಯದ ಬಗ್ಗೆ ಡಾ ದೀಪಾ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಕರನ್ನು ಉದ್ದೇಶಿಸುತ್ತಾ, ಇಂದಿನ ಪೀಳಿಗೆಯ ಮಕ್ಕಳೊಂದಿಗೆ ವ್ಯವಹರಿಸುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. ಈ ಪೀಳಿಗೆಯು ಅಂತರ್ಜಾಲ ಪೀಳಿಗೆ ಎಂದೇ ಕರೆಯಲ್ಪಡುವ ಕಾರಣ ಇಂದಿನ ಮಕ್ಕಳು ಶಿಕ್ಷಕರಿಗೆ ಯಕ್ಷ ಪ್ರಶ್ನೆಯಾಗಿದ್ದಾರೆ ಎಂದರು. ಅಂತಹ ಮಕ್ಕಳಿಗೆ ಯಾವ ರೀತಿಯಲ್ಲಿ ಸೂಕ್ಷಮತೆಯಿಂದ ಬೋಧನೆಯನ್ನು ನೀಡಬಹುದೆನ್ನುವುದನ್ನು ವಿವಿಧ ಚಟುವಟಿಕೆ ಮತ್ತು ಹಲವಾರು ನಿದರ್ಶನಗಳ ಮೂಲಕ ವಿವರಿಸಿದರು.

ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ ಇಲ್ಲಿನ ಪ್ರಾಂಶುಪಾಲರಾದ ಫಾ ಅನಿಲ್ ಡಿಕೋಸ್ಟಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಗಣೇಶ್ ನಾಯಕ್, ಕಾರ್ಯದರ್ಶಿ ನಿತ್ಯಾನಂದ ನಾಯಕ್ ಮತ್ತು ಡಾ. ದೀಪಕ್ ರಾಮ್ ಬಾಯರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.