ಮಿಷನ್ ಕರ್ನಾಟಕ ಟು ಕಾಶಿ; ಕರ್ನಾಟಕದಿಂದ ವಾರಣಾಸಿಗೆ ಶೀಘ್ರವೆ ವಿಶೇಷ ರೈಲು: ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯು ವಾರಣಾಸಿಗೆ (ಕಾಶಿ) ವಿಶೇಷ ರೈಲನ್ನು ಆಯೋಜಿಸುತ್ತಿದ್ದು, ಪ್ರತಿ ವರ್ಷ 30,000 ಕಾಶಿ ಯಾತ್ರಾರ್ಥಿಗಳಿಗೆ ತಲಾ 5,000 ರೂ.ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದು, ಅವರ ಸಲಹೆಯಂತೆ ಭಾರತ್ ಗೌರವ್ ಪ್ರವಾಸೋದ್ಯಮ ಯೋಜನೆಯಡಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಳೆಯ ರೈಲುಗಳನ್ನು ಪ್ರವಾಸೋದ್ಯಮಕ್ಕಾಗಿ ಗುತ್ತಿಗೆಗೆ ತೆಗೆದುಕೊಳ್ಳಲಾಗುವುದು. ಈ ರೈಲುಗಳ ನೋಂದಣಿಗಾಗಿ 1 ಲಕ್ಷ ರೂಪಾಯಿಯನ್ನು ಈಗಾಗಲೇ ಪಾವತಿಸಲಾಗಿದೆ.

ಈ ರೈಲುಗಳು ಹದಿನೆರಡು ಎಸಿ ಮತ್ತು ಎರಡು ನಾನ್ ಎಸಿ ಕೋಚ್‌ಗಳನ್ನು ಹೊಂದಿರುತ್ತದೆ. ಕಾಶಿ, ಶ್ರೀಶೈಲ ಮತ್ತು ಅಂಜನಾದ್ರಿಯನ್ನು ಒಳಗೊಂಡಂತೆ ಏಳು ದಿನಗಳ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಈ ರೈಲು ಶೀಘ್ರದಲ್ಲೇ ಓಡಲಿದೆ ಎಂದು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಹಜ್ ಯಾತ್ರೆಯ ಬಗ್ಗೆ ಮಾಹಿತಿ ನೀಡಿದ ಸಚಿವೆ ಭಾರತದ ಹಜ್ ಕೋಟಾ ಈ ಬಾರಿ 56,601 ಇದರಲ್ಲಿ ಕರ್ನಾಟಕದ ಕೋಟಾ 2,660 ಆಗಿದೆ. 65 ವರ್ಷ ವಯೋಮಿತಿ ನಿಗದಿಪಡಿಸುವ ಮುನ್ನ ರಾಜ್ಯದಿಂದ 4,500 ಅರ್ಜಿಗಳು ಬಂದಿದ್ದವು. ಈಗ ಇರುವ ಅರ್ಜಿಗಳ ಸಂಖ್ಯೆ 4,231. ಯಾತ್ರಾರ್ಥಿಗಳನ್ನು ಖುರ್ರಾ (ಲಾಟರಿ) ಮೂಲಕ ಆಯ್ಕೆ ಮಾಡಲಾಗುತ್ತದೆ. ಹಜ್ ದಿನ (ಅರಾಫತ್) ಜುಲೈ 9. ಹಜ್ ಫ್ಲೈಟ್‌ಗಳು ಮೇ 31 ರಂದು ಪ್ರಾರಂಭವಾಗುತ್ತವೆ. ಕರ್ನಾಟಕದ ಯಾತ್ರಾರ್ಥಿಗಳು ಜೂನ್ 10 ರಿಂದ ತಮ್ಮ ಅವಕಾಶವನ್ನು ಪಡೆಯಬಹುದು. ಅವರಿಗೆ ತರಬೇತಿ ನೀಡಲಾಗುವುದು ಮತ್ತು ಅವರು ಸೌದಿಯಲ್ಲಿ ಇಳಿದಾಗ ಅವರಿಗೆ ಸಹಾಯ ಮಾಡಲು ರಾಜ್ಯದ ಅಧಿಕಾರಿಗಳು ಅಲ್ಲಿರುತ್ತಾರೆ ಎಂದರು.

ಮೂಲ ಲೇಖನ: ಡೆಕ್ಕನ್ ಹೆರಾಲ್ಡ್