ಮಳೆಗಾಲ ಶುರುವಾಯ್ತು ಅಂದ್ರೆ ಏನಾದರೂ ಬಿಸಿ-ಬಿಸಿ ಮಾಡಿ ತಿನ್ನಬೇಕು ಅಥವಾ ಕುಡಿಯಬೇಕು ಎಂಬ ಬಯಕೆಯಾಗುವುದು ಸಹಜ. ಜೋರಾಗಿ ಮಳೆ ಸುರಿಯುವ ಸಮಯದಲ್ಲಿ ಬಿಸಿ-ಬಿಸಿ ಸೂಪ್ ಮಾಡಿ ಕುಡಿಯುವುದರಲ್ಲಿರುವ ಮಜಾ ಬೇರ್ಯಾವುದರಲ್ಲೂ ಇಲ್ಲ. ಇದರಿಂದ ನಾಲಿಗೆಗೆ ರುಚಿಯೂ ಹೆಚ್ಚುತ್ತದೆ, ಮೈಯ ಚಳಿಯೂ ಬಿಡುತ್ತದೆ. ಆಲಸ್ಯದಿಂದ ಕೂಡಿರುವ ದೇಹಕ್ಕೆ ಉಲ್ಲಾಸ ನೀಡುತ್ತದೆ. ಮಳೆಗಾಲದಲ್ಲಿ ಬಿಸಿ-ಬಿಸಿಯಾದ ಸೂಪ್ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಸೂಪ್ ನ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ ಎನ್ನುತ್ತಾರೆ ಸಿಂಥಿಯಾ ಮೆಲ್ವಿನ್. ಅವರ ಈ ವಾರದ “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ”ಅಂಕಣ ಇಲ್ಲಿದೆ .
◼️ನುಗ್ಗೆ ಸೊಪ್ಪಿನ ಸೂಪ್
ಬೇಕಾಗುವ ಸಾಮಗ್ರಿಗಳು
*2 1/2 ಕಪ್ ನುಗ್ಗೆ ಸೊಪ್ಪು
*ಕಾಳುಮೆಣಸಿನ ಹುಡಿ
*2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್
*3ಎಸಳು ಬೆಳ್ಳುಳ್ಳಿ
*1/2″ ಚಕ್ಕೆ
*1 ಈರುಳ್ಳಿ
*1 ಟೊಮೆಟೊ
*2 ಸ್ಪೂನ್ ತುಪ್ಪ
*ನಿಂಬೆರಸ ಸ್ವಲ್ಪ
*ರುಚಿಗೆ ತಕ್ಕಷ್ಟು ಉಪ್ಪು
ಹೇಗೆ ಮಾಡೋದು?
ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಉಪ್ಪು ಮತ್ತು ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಬೇಯಿಸಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ತುಪ್ಪವನ್ನು ಕಾಯಿಸಿ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೊ ಹಾಕಿ ಬಾಡಿಸಿ ನಂತರ ರುಬ್ಬಿದ ನುಗ್ಗೆ ಸೊಪ್ಪು ಕಾಳುಮೆಣಸಿನ ಹುಡಿ,ಚಕ್ಕೆ ಬೇಕಾದಷ್ಟು ನೀರು ಸೇರಿಸಿ ಕುದಿಸಿ. ಕೊನೆಗೆ ಸ್ವಲ್ಪ ನೀರಿನಲ್ಲಿ ಬೆರೆಸಿದ ಕಾರ್ನ್ ಫ್ಲೋರ್ ಮತ್ತು ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಸೂಪ್ ಸ್ವಲ್ಪ ದಪ್ಪವಾದಾಗ ಗ್ಯಾಸ್ ಆಫ್ ಮಾಡಿ.
ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಆಂಟಿ ಆಕ್ಸಿಡೆಂಟ್ ಗಳು, ವಿಟಮಿನ್-ಸಿ ಮತ್ತು ಇತರ ಸಕ್ರಿಯ ವಸ್ತುಗಳು ಇರುವುದರಿಂದ ಕ್ಯಾನ್ಸರ್ ಖಾಯಿಲೆಯನ್ನು ನಿವಾರಿಸುತ್ತದೆ. ಹಾಗೂ ಲಿವರ್ ಅನ್ನು ರಕ್ಷಿಸುತ್ತದೆ,ಕಣ್ಣಿನ ದೃಷ್ಟಿಗೆ ಒಳ್ಳೆಯದು, ಸಕ್ಕರೆ ಖಾಯಿಲೆಯನ್ನು ನಿವಾರಿಸುತ್ತದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಹೃದಯದ ಖಾಯಿಲೆಗೆ ರಾಮಬಾಣ, ದೇಹದ ತೂಕ ಕಡಿಮೆ ಮಾಡಲು ಸಹಕಾರಿ.
◼️ಮೊಟ್ಟೆಯ ಸೂಪ್
ಬೇಕಾಗುವ ಸಾಮಗ್ರಿ
*3ಮೊಟ್ಟೆ
*ಬೆಣ್ಣೆ 2 ಸ್ಪೂನ್
*1 ಈರುಳ್ಳಿ
*2 ಟೇಬಲ್ ಸ್ಪೂನ್ ಗೋಧಿಹಿಟ್ಟು
*3 ಸ್ಪೂನ್ ಟೊಮೆಟೊ ಪೇಸ್ಟ್
*2 ಟೇಬಲ್ ಸ್ಪೂನ್ ತುಪ್ಪ
*1/2 ಟೀಸ್ಪೂನ್ ಕಾಳುಮೆಣಸಿನ ಹುಡಿ
*ಸ್ವಲ್ಪ ಅರಿಶಿನ ಹುಡಿ
*ಕೊತ್ತಂಬರಿ ಸೊಪ್ಪು ಸ್ವಲ್ಪ
*ರುಚಿಗೆ ತಕ್ಕಷ್ಟು ಉಪ್ಪು
ಮಾಡೋದು ಹೇಗೆ
ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಕೆಂಪಾಗುವವರೆಗೆ ತುಪ್ಪದಲ್ಲಿ ಹುರಿಯಿರಿ ನಂತರ ಟೊಮೆಟೊ ಪೇಸ್ಟ್, ಮೊಟ್ಟೆಯನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. 5ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಬೆಣ್ಣೆಯನ್ನು ಕಾಯಿಸಿ ಗೋಧಿಹಿಟ್ಟು ಕೆಂಪಾಗುವವರೆಗೂ ಹುರಿದು ಸೂಪ್ ಗೆ ಸೇರಿಸಿ. ಉಪ್ಪು, ಕಾಳುಮೆಣಸಿನ ಹುಡಿ, ಅರಿಶಿನ ಹುಡಿ ಸೇರಿಸಿ ಚೆನ್ನಾಗಿ ಕುದಿಸಿ ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿ.
ಮೊಟ್ಟೆಯಲ್ಲಿ ಅಧಿಕ ಪ್ರೋಟೀನ್ ಮತ್ತು ವಿಟಮಿನ್-ಡಿ ಅಂಶವಿದೆ. ಇದು ಕಬ್ಬಿಣದಾಂಶವನ್ನು ಹೆಚ್ಚಿಸುತ್ತದೆ, ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ, ಬಲವಾದ ಸ್ನಾಯುಗಳ ರಚನೆಗೆ ಸಹಾಯಕ.
ಸಿಂಥಿಯಾ ಮೆಲ್ವಿನ್ ಬಜಗೋಳಿಯ ಮುಡಾರು ನಿವಾಸಿ, ಗೃಹಿಣಿಯಾಗಿರುವ ಇವರಿಗೆ ನವೀನ ಪಾಕ ಪ್ರಯೋಗ, ಆರೋಗ್ಯಕರ ಜೀವನವಿಧಾನ ಅನುಸರಿಸುವಿಕೆ, ಸಂಗೀತ ಅಂದರೆ ಪ್ರೀತಿ