ಗಣೇಶ ಚತುರ್ಥಿಯಂದು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಸಂಸತ್ತಿನ ವಿಶೇಷ ಅಧಿವೇಶನ?

ನವದೆಹಲಿ: ಸೆಪ್ಟೆಂಬರ್ 18 ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನವು ಸೆಪ್ಟೆಂಬರ್ 18 ರಂದು ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದೆ ಮತ್ತು ನಂತರ ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.

ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದು, ಅಧಿವೇಶನದ ವಿಷಯವನ್ನು ಇನ್ನೂ ಹೇಳಲಾಗಿಲ್ಲ. ಮಾಧ್ಯಮಗಳಲ್ಲಿ ಹಲವಾರು ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದು ಈ ಬಗ್ಗೆ ಸರಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ಏತನ್ಮಧ್ಯೆ ಸೆಂಟ್ರಲ್ ವಿಸ್ತಾ ಹೊಸ ಸಂಸತ್ ಭವನವು ಉದ್ಘಾಟನೆಯಾಗಿ ಹಲವು ದಿನಗಳು ಕಳೆದಿದ್ದರೂ ಇನ್ನೂ ಅಧಿಕೃತವಾಗಿ ಅಲ್ಲಿ ಅಧಿವೇಶನಗಳ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯಂದು ಅಧಿವೇಶನವು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಎನ್ನುವ ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.